ವಾದ್ರಾ ಆಪ್ತ ಕಾಂಗ್ರೆಸ್ ಕಾರ್ಯಕರ್ತ ಶರ್ಮಾ ಇಡಿ ವಶಕ್ಕೆ

Update: 2018-12-08 15:57 GMT

ಹೊಸದಿಲ್ಲಿ,ಡಿ.7: ಸೋನಿಯಾ ಗಾಂಧಿ ಅವರ ಅಳಿಯ ಹಾಗೂ ಉದ್ಯಮಿ ರಾಬರ್ಟ್ ವಾದ್ರಾ ಅವರ ಬಂಟನೆನ್ನಲಾಗಿರುವ ಕಾಂಗ್ರೆಸ್ ಕಾರ್ಯಕರ್ತ ಜಗದೀಶ ಶರ್ಮಾ ಅವರ ನಿವಾಸದ ಮೇಲೆ ಶನಿವಾರ ಬೆಳಿಗ್ಗೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯ(ಇಡಿ)ವು ವಿಚಾರಣೆಗಾಗಿ ಅವರನ್ನು ತನ್ನ ಕಚೇರಿಗೆ ಕರೆದೊಯ್ದಿದೆ.

‘‘ವಾದ್ರಾ ಅವರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ. ಮೋದಿ ಸರಕಾರವು ಅವರನ್ನು ಬಲೆಗೆ ಬೀಳಿಸಲು ಬಯಸುತ್ತಿದೆ. ನನ್ನ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಏನೂ ಇಲ್ಲದಿದ್ದಾಗ ಅವರಿಗೆ ದೊರೆಯುವುದಾದರೂ ಏನು?, ಅವರು ನನ್ನನ್ನು ವಿಚಾರಣೆಗಾಗಿ ಇಡಿ ಕಚೇರಿಗೆ ಕರೆದೊಯ್ಯುತ್ತಿದ್ದಾರೆ ’’ ಎಂದು ಶರ್ಮಾ ಸುದ್ದಿಸಂಸ್ಥೆಗೆ ತಿಳಿಸಿದರು.

ಇಡಿ ಶುಕ್ರವಾರ ರಕ್ಷಣಾ ಪೂರೈಕೆದಾರರಿಂದ ಹಣವನ್ನು ಪಡೆದಿದ್ದ ಆರೋಪದಲ್ಲಿ ದಿಲ್ಲಿ ಮತ್ತು ಬೆಂಗಳೂರಿನ ಮೂರು ಕಡೆಗಳಲ್ಲಿ ವಾದ್ರಾರ ಕೆಲವು ಆಪ್ತರ ನಿವಾಸಗಳ ಮೇಲೆ ದಾಳಿಗಳನ್ನು ನಡೆಸಿತ್ತು.

ಇಡಿ ಅಧಿಕಾರಿಗಳು ಯಾವುದೇ ಸರ್ಚ್ ವಾರಂಟ್‌ಗಳನ್ನೂ ತೋರಿಸದೆ ವಾದ್ರಾರ ನಿಕಟವರ್ತಿಗಳು ಮತ್ತು ಉದ್ಯಮ ಪಾಲುದಾರರ ಮೇಲೆ ದಾಳಿಗಳನ್ನು ನಡೆಸಿದ್ದಾರೆ ಎಂದು ವಾದ್ರಾ ಪರ ವಕೀಲ ಸುಮನ್ ಖೇತಾನ್ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News