ಶ್ರೀನಗರ: ಎನ್‌ಕೌಂಟರ್‌ನಲ್ಲಿ ಮೂರು ಉಗ್ರರ ಹತ್ಯೆ

Update: 2018-12-09 14:29 GMT

ಶ್ರೀನಗರ, ಡಿ.9: ಶ್ರೀನಗರದ ಹೊರವಲಯದಲ್ಲಿ ಭದ್ರತಾ ಪಡೆಗಳು ಹಾಗೂ ಭಯೋತ್ಪಾದಕರ ಮಧ್ಯೆ ನಡೆದ 18 ಗಂಟೆಗಳ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರು ಹತರಾಗಿದ್ದಾರೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ. ಎನ್‌ಕೌಂಟರ್ ನಡೆದ ಸ್ಥಳದಲ್ಲಿದ್ದ ಮೂರು ಮನೆಗಳು ಸ್ಫೋಟದಿಂದ ನಾಶವಾಗಿವೆ. ಮೃತ ಉಗ್ರರ ಗುರುತು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದ್ದು , ಉಗ್ರರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

ಶನಿವಾರ ಸಂಜೆ ಆರಂಭವಾಗಿದ್ದ ಗುಂಡಿನ ಚಕಮಕಿಯಲ್ಲಿ ಐದು ಮಂದಿ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ವರದಿ ತಿಳಿಸಿದ್ದರೆ, ಓರ್ವ ಯೋಧ ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಎನ್‌ಕೌಂಟರ್ ನಡೆದ ಸ್ಥಳದಲ್ಲಿ ಕಲ್ಲೆಸೆತ ನಡೆಸುತ್ತಿರುವ ಯುವಕರು ಹಾಗೂ ಭದ್ರತಾ ಪಡೆಗಳ ಮಧ್ಯೆ ತೀವ್ರ ಘರ್ಷಣೆ ನಡೆದಿದ್ದು , ಯುವಕರನ್ನು ಚದುರಿಸಲು ಅಶ್ರುವಾಯು ಮತ್ತು ಪೆಲೆಟ್‌ಗಳನ್ನು ಪ್ರಯೋಗಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಉತ್ತರ ಕಾಶ್ಮೀರದ ಬಂಡಿಪೋರ ಜಿಲ್ಲೆಯ ಮುಜ್‌ಗುಂದ್ ಪ್ರದೇಶದಲ್ಲಿ ಉಗ್ರರ ಚಲನವಲನದ ಬಗ್ಗೆ ದೊರೆತ ಮಾಹಿತಿಯನ್ವಯ ಅಲ್ಲಿಗೆ ಧಾವಿಸಿದ ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರಿದಿದೆ. ಆಗ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ಆರಂಭಿಸಿದರು ಎಂದು ವಕ್ತಾರರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News