ಸಾಯುವ ಮುನ್ನ ಖಶೋಗಿ ಹೇಳಿದ ಕೊನೆ ಮಾತು ಬಹಿರಂಗಪಡಿಸಿದ ಸಿಎನ್‌ಎನ್

Update: 2018-12-10 16:57 GMT

ವಾಷಿಂಗ್ಟನ್, ಡಿ.10: ಸೌದಿ ಪತ್ರಕರ್ತ ಜಮಾಲ್ ಖಶೋಗಿ ಸಾಯುವ ಮುನ್ನ ಅಂತಿಮವಾಗಿ ಏನು ಹೇಳಿದ್ದರು ಎಂಬ ಆಡಿಯೊ ಟೇಪ್ ಅನ್ನು ಸಿಎನ್‌ಎನ್ ರವಿವಾರ ಬಹಿರಂಗಪಡಿಸಿದೆ. "ನನಗೆ ಉಸಿರಾಡಲು ಸಾಧ್ಯವಾಗುತ್ತಿಲ್ಲ" ಎಂದು ಖಶೋಗಿ ಹೇಳಿದ್ದರ ಭಾಷಾಂತರ ರೂಪವನ್ನು ಸಿಎನ್‌ಎನ್ ಪ್ರಸಾರ ಮಾಡಿದೆ.

ಇದರಿಂದ ಖಶೋಗಿ ಹತ್ಯೆ ಪೂರ್ವನಿಯೋಜಿತ ಕೃತ್ಯ ಎನ್ನುವುದು ಸ್ಪಷ್ಟವಾಗುತ್ತದೆ; ಹತ್ಯೆ ಸಂದರ್ಭದಲ್ಲಿ ಹಲವು ಬಾರಿ ದೂರವಾಣಿ ಕರೆ ಮಾಡಿ ಕೃತ್ಯದ ಪ್ರಗತಿ ಬಗ್ಗೆ ಮಾಹಿತಿ ನೀಡಲಾಗುತ್ತಿತ್ತು ಎನ್ನುವುದು ಸ್ಪಷ್ಟವಾಗಿ ತಿಳಿದುಬಂದಿದೆ ಎಂದು ಮೂಲಗಳು ಹೇಳಿವೆ. ರಿಯಾದ್‌ನಲ್ಲಿರುವ ಉನ್ನತ ಅಧಿಕಾರಿಗಳಿಗೆ ಈ ಕರೆಗಳನ್ನು ಮಾಡಲಾಗಿತ್ತು ಎನ್ನುವುದು ಟರ್ಕಿ ಅಧಿಕಾರಿಗಳ ನಂಬಿಕೆ.

ವಾಷಿಂಗ್ಟನ್ ಪೋಸ್ಟ್‌ನ ವರದಿಗಾರರಾಗಿದ್ದ ಖಶೋಗಿ, ಅಕ್ಟೋಬರ್ 2ರಂದು ಇಸ್ತಾಂಬುಲ್‌ನಲ್ಲಿರುವ ಸೌದಿ ಕಾನ್ಸುಲೇಟ್ ಕಚೇರಿಯನ್ನು ಪ್ರವೇಶಿಸಿದ ಸ್ವಲ್ಪವೇ ಸಮಯದಲ್ಲಿ ಹತ್ಯೆಗೀಡಾಗಿದ್ದರು. ಸಾಯುವ ಮುನ್ನ ಖಶೋಗಿ ತಮ್ಮ ಹಂತಕರ ವಿರುದ್ಧ ಹೋರಾಡುತ್ತಿದ್ದ ಅಂಶ ಕೂಡಾ ಈ ಧ್ವನಿಮುದ್ರಣದಿಂದ ಬೆಳಕಿಗೆ ಬಂದಿದೆ ಎಂದು ಸಿಎನ್‌ಎನ್ ಹೇಳಿದೆ. ಪತ್ರಕರ್ತನ ದೇಹವನ್ನು ಗರಗಸ ಬಳಸಿ ವಿರೂಪಗೊಳಿಸಿರುವ ಶಬ್ದವನ್ನು ಸಿಎನ್‌ಎನ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಧ್ವನಿಮುದ್ರಣದ ರೂಪಾಂತರವನ್ನು ಟರ್ಕಿ ಗುಪ್ತಚರ ವಿಭಾಗದ ಅಧಿಕಾರಿಗಳು ಸಿದ್ಧಪಡಿಸಿದ್ದು, ಇದರ ಭಾಷಾಂತರ ಅವತರಣಿಕೆಯನ್ನು ತನಿಖೆ ವೇಳೆ ಓದಲಾಗಿದೆ ಎಂದು ಸಿಎನ್‌ಎನ್ ಹೇಳಿದೆ.

ಈ ಮಧ್ಯೆ ಖಶೋಗಿ ಹತ್ಯೆ ಪ್ರಕರಣದ ಶಂಕಿತರನ್ನು ಗಡೀಪಾರು ಮಾಡಬೇಕು ಎಂಬ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಬ್ ಎರ್ದೊಗಾನ್ ಬೇಡಿಕೆಯನ್ನು ಸೌದಿ ಅರೇಬಿಯಾ ವಿದೇಶಾಂಗ ಸಚಿವರು ರವಿವಾರ ತಿರಸ್ಕರಿಸಿದ್ದಾರೆ.

ಹಂತಕರ ಕೈಯಲ್ಲಿ ನರಳುವ ಭೀಭತ್ಸ ವಿವರಗಳು...

  ಜಮಾಲ್ ಖಶೋಗಿ ತನ್ನ ಹಂತಕರ ಕೈಯಲ್ಲಿ ಸಿಲುಕಿ ನರಳುತ್ತಿದ್ದ ಭೀಭತ್ಸ ವಿವರಗಳು ಧ್ವನಿಮುದ್ರಣದ ಲಿಖಿತ ಪ್ರತಿಯಲ್ಲಿದೆ ಎಂದು ಸಿಎನ್‌ಎನ್ ಹೇಳಿದೆ.

ಭಿನ್ನಮತೀಯ ಪತ್ರಕರ್ತನ ದೇಹವನ್ನು ಗರಗಸದಿಂದ ತುಂಡು ಮಾಡುವ ಸದ್ದುಗಳ ಬಗ್ಗೆಯೂ ಲಿಖಿತ ಪ್ರತಿಯಲ್ಲಿ ವಿವರಗಳಿವೆ.

ಮೂಲ ಲಿಖಿತ ಪ್ರತಿಯನ್ನು ಟರ್ಕಿ ಗುಪ್ತಚರ ಸಂಸ್ಥೆ ಸಿದ್ಧಪಡಿಸಿದೆ. ಅದರ ಭಾಷಾಂತರಿತ ಆವೃತ್ತಿಯನ್ನು ತನ್ನ ಮೂಲವು ಓದಿ ಹೇಳಿದೆ ಎಂದು ಸಿಎನ್‌ಎನ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News