2.5 ಬಿಲಿಯನ್ ಯುರೋ ಹೆಚ್ಚು ಬೆಲೆಗೆ ರಫೇಲ್ ಡೀಲ್ ಅಂತಿಮಗೊಳಿಸಿದ್ದು ಪ್ರಧಾನಿ ಮೋದಿ

Update: 2018-12-14 05:32 GMT

caravanmagazine.in ವಿಶೇಷ ತನಿಖಾ ವರದಿ

ಹೊಸದಿಲ್ಲಿ, ಡಿ. 14 : ರಫೇಲ್ ವಿಮಾನ ಖರೀದಿಗೆ ಸಂಬಂಧಿಸಿದಂತೆ ಇನ್ನೊಂದು ಮಹತ್ವದ ಮಾಹಿತಿಯನ್ನು ದಿ ಕಾರವಾನ್ ನಿಯತಕಾಲಿಕೆಯ ವೆಬ್ ಸೈಟ್ caravanmagazine.in ನಲ್ಲಿ ಹರತೋಷ್ ಸಿಂಗ್ ಬಾಲ್ ವರದಿ ಮಾಡಿದ್ದಾರೆ. 

ಕಾರವಾನ್ ಗೆ ಲಭಿಸಿರುವ ಹಾಗು ಅದು ಸದ್ಯ ಸೇವೆಯಲ್ಲಿರುವ ಹಿರಿಯ ರಕ್ಷಣಾ ಅಧಿಕಾರಿಯ ಮೂಲಕ ಖಚಿತಪಡಿಸಿರುವ ಮಾಹಿತಿ ಪ್ರಕಾರ ರಫೇಲ್ ಖರೀದಿಗೆ 2016 ರಲ್ಲಿ ಅಂತಿಮಗೊಳಿಸಲಾದ ಡೀಲ್ ನಲ್ಲಿರುವ ಬೆಲೆಗಿಂತ  2.5 ಬಿಲಿಯನ್ ಯುರೋ  ಕಡಿಮೆ ಮೊತ್ತಕ್ಕೆ ಮೊದಲು ಇಡೀ ವ್ಯವಹಾರವನ್ನು ಅಂತಿಮಗೊಳಿಸಲಾಗಿತ್ತು. ಆಗ ಅಂತಿಮಗೊಳಿಸಲಾಗಿದ್ದ ಮೊತ್ತ 5.2 ಬಿಲಿಯನ್ ಯುರೋ.

ಆದರೆ ಆ ಮೊತ್ತಕ್ಕೆ ವ್ಯವಹಾರ ಕಾರ್ಯಸಾಧುವಾಗಲಾರದು ಎಂಬ ಸಂಶಯಗಳು ವ್ಯಕ್ತವಾದ ಮೇಲೆ ಆಗ ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕರ್ ಅವರ ನೇತೃತ್ವದ ಡಿಎಸಿ ( ಡಿಫೆನ್ಸ್ ಅಕ್ವಿಸಿಷನ್ ಕೌನ್ಸಿಲ್ ) ಬೆಲೆಯನ್ನು ಪರಿಷ್ಕೃತಗೊಳಿಸಲು ಪ್ರಕ್ರಿಯೆಯನ್ನು ಸೂಚಿಸಿತು. ಆದರೆ ಈ ಬೆಲೆ ಪರಿಷ್ಕೃತಗೊಳಿಸುವ ಪ್ರಕ್ರಿಯೆ ಕಡ್ಡಾಯ ನಿಯಮಗಳ ಅನುಸಾರ ನಡೆಯಲಿಲ್ಲ. ಕೊನೆಗೆ ಅಂತಿಮ ಬೆಲೆಯನ್ನು ( 7.8 ಬಿಲಿಯನ್  ಯುರೋ ) ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸುರಕ್ಷತೆ ಕುರಿತ ಸಂಪುಟ ಸಮಿತಿ ನಿರ್ಧರಿಸಿತು. ಆದರೆ ವಿಶೇಷವೆಂದರೆ ಈ ವಿಷಯ ಸುಪ್ರೀಂ ಕೋರ್ಟ್ ನಲ್ಲಿ ರಫೇಲ್ ಖರೀದಿ ಕುರಿತು ನಡೆಯುತ್ತಿರುವ ವಿಚಾರಣೆ ವೇಳೆ ಸರಕಾರ ಸಲ್ಲಿಸಿರುವ ವಿವರಣೆಯಲ್ಲಿ ಉಲ್ಲೇಖಿಸಲಾಗಿಲ್ಲ.

ರಫೇಲ್ ಡೀಲ್ ನ ಅಂತಿಮ ಬೆಲೆಯನ್ನು ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರೇ 24 ಆಗಸ್ಟ್ 2016 ರಂದು ಮಂಜೂರು ಮಾಡಿದ್ದರು. ಆದರೆ ಹೀಗೆ ಮಾಡುವಾಗ ಅವರು ತನ್ನದೇ ಸರಕಾರ ಬೆಲೆ ಅಂತಿಮಗೊಳಿಸಲು ನೇಮಿಸಿದ್ದ ಈ ವಿಷಯಗಳ ತಜ್ಞ ಅಧಿಕಾರಿ ಅಂತಿಮಗೊಳಿಸಿದ್ದ ಬೆಲೆಯನ್ನು ಬದಿಗೆ ಸರಿಸಿದ್ದರು. ಹೀಗೆ ಮಾಡುವಾಗ ಪ್ರಧಾನಿ ನೇತೃತ್ವದ ಸಮಿತಿ  ಡಿಪಿಪಿ ( ಡಿಫೆನ್ಸ್ ಪ್ರೊಕ್ಯೂರ್ ಮೆಂಟ್ ಪ್ರೊಸೀಜರ್ 2013) ಪ್ರಕಾರ ರಕ್ಷಣಾ ಸಾಮಗ್ರಿ ಖರೀದಿಸುವಾಗ ಕಡ್ಡಾಯವಾಗಿ ಅನುಸರಿಸಬೇಕಾದ ಪ್ರಕ್ರಿಯೆಯನ್ನು ಅನುಸರಿಸಿರಲಿಲ್ಲ. 

ನಿಯಮಗಳ ಪ್ರಕಾರ ಬೆಲೆಯನ್ನು ಅಂತಿಮಗೊಳಿಸಲು ಭಾರತೀಯ ಸಮಾಲೋಚಕ ತಂಡವೊಂದನ್ನು (Indian Negotiating Team INT)ರಚಿಸಲಾಗಿತ್ತು. ಆ ತಂಡದ ಬೆಲೆ ಸಲಹೆಗಾರ ಎಂ ಪಿ ಸಿಂಗ್ ಅವರು ಬೆಲೆ ನಿಗದಿ ಪ್ರಕ್ರಿಯೆಯನ್ನು ನಿಯಮಗಳ ಪ್ರಕಾರ ನಡೆಸಿ ಸಂಪೂರ್ಣ ವಿವರಗಳನ್ನು ಪರಿಗಣಿಸಿ 36 ರಫೇಲ್ ಜೆಟ್ ಗಳಿಗೆ €5.2 ಬಿಲಿಯನ್ ಬೆಲೆ ನಿಗದಿಪಡಿಸಿದ್ದರು . ಈ ಬೆಲೆಯನ್ನು ಐ ಎನ್ ಟಿ ತಂಡದಲ್ಲಿದ್ದ ಇನ್ನಿಬ್ಬರು ಸದಸ್ಯರಾದ ವಾಯು ಸೇನೆಯ ಸ್ವಾಧೀನ ವ್ಯವಸ್ಥಾಪಕ ಹಾಗು ಸರಕಾರದ ಜಂಟಿ ಕಾರ್ಯದರ್ಶಿ ರಾಜೀವ್ ವರ್ಮಾ ಹಾಗು ವಾಯುಸೇನೆಯ ವಿತ್ತ ವ್ಯವಸ್ಥಾಪಕ ಅನಿಲ್ ಸುಲೆ ಇವರಿಬ್ಬರು ಅನುಮೋದಿಸಿದ್ದರು.

ಸಿಂಗ್ , ವರ್ಮಾ ಹಾಗು ಸುಲೆ ಈ ಮೂವರೂ ಇಂತಹ ರಕ್ಷಣಾ ಸಾಮಗ್ರಿ ಖರೀದಿ ಪ್ರಕ್ರಿಯೆಯಲ್ಲಿ ಅತ್ಯಂತ ಅನುಭವೀ ಹಾಗು ತಜ್ಞರಾಗಿದ್ದರು. ಐ ಎನ್ ಟಿ ಯಲ್ಲಿ ಒಟ್ಟು ಏಳು ಸದಸ್ಯರಿದ್ದರು. ಈ ಮೂವರು ಅಂತಿಮಗೊಳಿಸಿದ ಬೆಲೆಯನ್ನು ಸಮಿತಿಯ ಅಧ್ಯಕ್ಷ ಹಾಗು ಇತರ ಮೂವರು ಸದಸ್ಯರು ತಿರಸ್ಕರಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News