ಅಯ್ಯಪ್ಪ ಧರ್ಮ ಸೇನೆ ಅಧ್ಯಕ್ಷ ರಾಹುಲ್ ಈಶ್ವರ್ ಬಂಧನ

Update: 2018-12-17 14:53 GMT

ಪಾಲಕ್ಕಾಡ್, ಡಿ.17: ಹಿಂದು ಮಹಾಸಭಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಅಯ್ಯಪ್ಪ ಧರ್ಮ ಸೇನೆಯ ಅಧ್ಯಕ್ಷ ರಾಹುಲ್ ಈಶ್ವರ್‌ರನ್ನು ಪಾಲಕ್ಕಾಡ್ ಪೊಲೀಸರು ಪಿಡಬ್ಲ್ಯೂಡಿ ವಿಶ್ರಾಂತಿ ಗೃಹದಿಂದ ಬಂಧಿಸಿದ್ದಾರೆ.

ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರು ಪ್ರವೇಶಿಸುವುದಕ್ಕೆ ಭಕ್ತರು ತಡೆಯೊಡ್ಡಿದ ಸಂದರ್ಭ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಈಶ್ವರ್ ವಿರುದ್ಧ ಪ್ರಕರಣ ದಾಖಲಾಗಿದೆ. ಬಳಿಕ ನ್ಯಾಯಾಲಯ ಕೆಲವು ಷರತ್ತು ವಿಧಿಸಿ ಜಾಮೀನು ಮಂಜೂರುಗೊಳಿಸಿತ್ತು. ಇದರಂತೆ, ಎರಡು ತಿಂಗಳು ಪ್ರತೀ ಶನಿವಾರ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ಅಲ್ಲಿ ಸಹಿ ಹಾಕಬೇಕು. ಆದರೆ ಈಶ್ವರ್ ಈ ಷರತ್ತನ್ನು ಉಲ್ಲಂಘಿಸಿದ್ದಾರೆ ಎಂದು ರಾನ್ನಿ ಪಟ್ಟಣದ ಗ್ರಾಮ ನ್ಯಾಯಾಲಯಕ್ಕೆ ಪೊಲೀಸರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಶನಿವಾರ ಈಶ್ವರ್ ಅವರ ಜಾಮೀನು ಅರ್ಜಿಯನ್ನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಅವರ ಬಂಧನವಾಗಿದೆ. ಡಿಸೆಂಬರ್ 8ರಂದು ರಾಹುಲ್ ಈಶ್ವರ್ ಸಹಿ ಹಾಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಮಧ್ಯೆ, ಮಾಧ್ಯಮವರೊಂದಿಗೆ ಮಾತನಾಡಿದ ರಾಹುಲ್ ಈಶ್ವರ್, ಪೊಲೀಸರು ಶಬರಿಮಲೆ ಭಕ್ತರ ವಿರುದ್ಧ ಪ್ರತೀಕಾರದ ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿಸಿದ್ದು, ಗ್ರಾಮ ನ್ಯಾಯಾಲಯದ ಆದೇಶ ಕೈ ಸೇರಿದ ಬಳಿಕ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News