ದೇಶದಲ್ಲಿ ಹಸಿವಿನಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದ ಕೇಂದ್ರ

Update: 2018-12-19 17:57 GMT

ಹೊಸದಿಲ್ಲಿ, ಡಿ. 19: ದೇಶದಲ್ಲಿ ಹಸಿವಿನಿಂದ ಯಾವುದೇ ಸಾವು ಸಂಭವಿಸಿರುವ ಬಗ್ಗೆ ಕೇಂದ್ರ ಸರಕಾರಕ್ಕೆ ತಿಳಿದಿಲ್ಲ ಎಂದು ಗ್ರಾಹಕ ವ್ಯವಹಾರ, ಆಹಾರ ಹಾಗೂ ಸಾರ್ವಜನಿಕ ವಿತರಣೆ ಸಚಿವಾಲಯ ಹೇಳಿದೆ. ಲೋಕಸಭೆಯಲ್ಲಿ ಮಂಗಳವಾರ ಪ್ರಶ್ನೆಯೊಂದಕ್ಕೆ ಸಚಿವಾಲಯ ಈ ಪ್ರತಿಕ್ರಿಯೆ ನೀಡಿತು.

ದೇಶದಲ್ಲಿ ಹಸಿವಿನಿಂದ ಸಾವು ಸಂಭವಿಸಿದ ಯಾವುದೇ ಘಟನೆ ಬಗ್ಗೆ ರಾಜ್ಯ ಸರಕಾರ ಅಥವಾ ಕೇಂದ್ರಾಡಳಿತ ಪ್ರದೇಶಗಳು ವರದಿ ಮಾಡಿಲ್ಲ. ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಸಿವಿನಿಂದ ಕೆಲವು ಸಾವು ಸಂಭವಿಸಿರುವ ಬಗ್ಗೆ ಮಾದ್ಯಮಗಳು ವರದಿ ಮಾಡಿವೆ. ಆದರೆ, ಜಾರ್ಖಂಡ್ ಸೇರಿದಂತೆ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ಹಸಿವಿನಿಂದ ಸಾವನ್ನಪ್ಪಿರುವುದನ್ನು ದೃಢೀಕರಿಸಲು ಸಾಧ್ಯವಾಗಿಲ್ಲ ಎಂದು ಗ್ರಾಹಕ ವ್ಯವಹಾರ, ಆಹಾರ ಹಾಗೂ ಸಾರ್ವಜನಿಕ ವಿತರಣೆ ಖಾತೆಯ ಸಹಾಯಕ ಸಚಿವ ಸಿ.ಆರ್. ಚೌಧರಿ ಹೇಳಿದರು.

ಇಲ್ಲಿ ಜಾರ್ಖಂಡ್ ಅನ್ನು ವಿಶೇಷವಾಗಿ ಉಲ್ಲೇಖಿಸಲಾಗುತ್ತದೆ. ಯಾಕೆಂದರೆ, ನಿರ್ದಿಷ್ಟವಾಗಿ ಕಲ್ಯಾಣ ಕಾರ್ಯಕ್ರಮಗಳಿಗೆ ಆಧಾರ್ ಜೋಡಣೆ ಕಡ್ಡಾಯ ಮಾಡಿದ ಬಳಿಕ ಸಾರ್ವಜನಿಕ ವಿತರಣಾ ವ್ಯವಸ್ಥೆ ಹಲವು ಸಂದರ್ಭಗಳಲ್ಲಿ ವಿವಾದಕ್ಕೆ ಒಳಗಾಗಿತ್ತು. 2017 ಸೆಪ್ಟಂಬರ್‌ನಲ್ಲಿ ರಾಜ್ಯದಲ್ಲಿ ಮೊದಲ ಹಸಿವಿನ ಸಾವು ಸಂಭವಿಸಿತ್ತು. 11 ವರ್ಷದ ಬಾಲಕಿ ಸಂತೋಷಿ ಕುಮಾರಿ ಆಹಾರ ಕೇಳುತ್ತಾ ಮೃತಪಟ್ಟಿದ್ದಳು. ಆಧಾರ್ ಜೋಡಿಸದ ಹಿನ್ನೆಲೆಯಲ್ಲಿ ಅವಳ ಕುಟುಂಬದ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗಿತ್ತು. ರಾಜ್ಯದಲ್ಲಿದ್ದ ಬಿಜೆಪಿ ಸರಕಾರ ಕುಮಾರಿ ಮಲೇರಿಯಾದಿಂದ ಮೃತಪಟ್ಟಿದ್ದಾಳೆ ಎಂದು ಹೇಳಿತು.

ಆದಾಗ್ಯೂ ಅದು, ಪಡಿತರ ಚೀಟಿ ರದ್ದುಗೊಳಿಸಲಾಗಿದೆ ಎಂಬುದನ್ನು ಒಪ್ಪಿಕೊಂಡಿತ್ತು. ಕುಮಾರಿ ಪ್ರಕರಣ ಒಂದು ಮಾತ್ರ ಅಲ್ಲ. ಜಾರ್ಖಂಡ್ ಹಾಗೂ ಇತರ ರಾಜ್ಯಗಳ ಸಾಮಾಜಿಕ ಹೋರಾಟಗಾರರು ಹಾಗೂ ಪತ್ರಕರ್ತರು ಹಲವು ಹಸಿವಿನಿಂದಾದ ಸಾವಿನ ವರದಿ ಮಾಡಿದ್ದರು. ‘ರೈಟ್ ಟು ಫುಡ್ ಅಭಿಯಾನ’ದ ಹಸಿವಿನಿಂದ ಸಾವನ್ನಪ್ಪಿದ ಜನರ ಪಟ್ಟಿಯನ್ನು ಸ್ವತಂತ್ರ ತನಿಖಾ ತಂಡ ಪರಿಶೀಲನೆ ನಡೆಸಿತ್ತು. 2017ರಿಂದ ಹಸಿವಿನಿಂದ 42 ಮಂದಿ ಸಾವನ್ನಪ್ಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News