ಮೇಕೆದಾಟು ಯೋಜನೆ: ಪಕ್ಷಭೇದ ಮರೆತು ಒಮ್ಮತದ ಹೋರಾಟಕ್ಕೆ ರಾಜ್ಯದ ಸಂಸದರ ನಿರ್ಧಾರ

Update: 2018-12-20 14:10 GMT

ಹೊಸದಿಲ್ಲಿ/ಬೆಂಗಳೂರು, ಡಿ. 20: ‘ಮೇಕೆದಾಟು ಯೋಜನೆ’ಗೆ ತಮಿಳುನಾಡಿನ ವಿರೋಧದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಸಂಸದರು ಪಕ್ಷಭೇದ ಮರೆತು ಸಂಸತ್ತಿನ ಒಳಗೆ ಮತ್ತು ಹೊರಗೆ ಒಗ್ಗಟ್ಟಿನ ಹೋರಾಟ ಮಾಡುವ ಒಮ್ಮತದ ನಿರ್ಣಯವನ್ನು ಕೈಗೊಳ್ಳಲಾಗಿದೆ.

ಗುರುವಾರ ಹೊಸದಿಲ್ಲಿಯಲ್ಲಿನ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರ ನಿವಾಸದಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ರಮೇಶ್ ಜಿಗಜಿಣಗಿ, ಅನಂತಕುಮಾರ್ ಹೆಗಡೆ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ರಾಜ್ಯದ ಎಲ್ಲ ಸಂಸದರು, ರಾಜ್ಯಸಭೆ ಸದಸ್ಯರು ಸೇರಿದಂತೆ ಒಟ್ಟು 33 ಸದಸ್ಯರು ಪಾಲ್ಗೊಂಡಿದ್ದರು.

ರಾಜ್ಯ ಸರಕಾರದ ಮಹತ್ವಾಕಾಂಕ್ಷಿಯ ಮೇಕೆದಾಟು ಯೋಜನೆಗೆ ಕೇಂದ್ರ ಜಲ ಆಯೋಗ ಒಪ್ಪಿಗೆ ನೀಡಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ತಮಿಳುನಾಡು ಸರಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈ ಮಧ್ಯೆ ಸಂಸತ್ ಅಧಿವೇಶನದಲ್ಲಿ ತಮಿಳುನಾಡಿನ ಸಂಸದರು ಸಂಸತ್ತಿನ ಒಳಗೆ ಪ್ರತಿಭಟನೆಗೆ ಮುಂದಾಗಿದ್ದರು. ಹೀಗಾಗಿ ಮೇಕೆದಾಟು ಅಣೆಕಟ್ಟು ಯೋಜನೆ ಕೈಗೆತ್ತಿಕೊಳ್ಳುವ ಸಂಬಂಧ ತಮಿಳುನಾಡಿನ ವಿರೋಧವನ್ನು ಹೇಗೆ ಎದುರಿಸಬೇಕು ಮತ್ತು ಅಣೆಕಟ್ಟು ನಿರ್ಮಿಸುವ ನಿಟ್ಟಿನಲ್ಲಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸರ್ವಪಕ್ಷ ಮುಖಂಡರು ಸುದೀರ್ಘ ಸಮಾಲೋಚನೆ ನಡೆಸಿದರು. ಆ ಬಳಿಕ ಮಾತನಾಡಿದ ಕೇಂದ್ರ ಸಚಿವ ಸದಾನಂದಗೌಡ, ಮೇಕೆದಾಟು ಮತ್ತು ಮಹಾದಾಯಿ ಯೋಜನೆಗಳ ಬಗ್ಗೆ ರಾಜ್ಯದ ಸಂಸದರೆಲ್ಲರೂ ಚರ್ಚಿಸಿದ್ದು, ರಾಜ್ಯದ ಹಿತದೃಷ್ಟಿಯಿಂದ ಪಕ್ಷಭೇದ ಮರೆತು ಹೋರಾಡಲು ನಿಶ್ಚಯಿಸಿದ್ದೇವೆ ಎಂದು ಇದೇ ವೇಳೆ ತಿಳಿಸಿದರು.

ರಾಜ್ಯದ ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆ ಯೋಜನೆಗಾಗಿ ಹೋರಾಟ ಮುಂದುವರಿಯಲಿದೆ. ಈಗಾಗಲೇ ಮೇಕೆದಾಟು ಯೋಜನೆಗೆ ಕೇಂದ್ರ ಸರಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಮಹಾದಾಯಿ ವಿಚಾರವಾಗಿ ಕೇಂದ್ರ ಸಚಿವರನ್ನು ಭೇಟಿ ಮಾಡುತ್ತೇವೆ. ತಮಿಳುನಾಡಿನ ಜೊತೆ ಚರ್ಚೆ ಮಾಡಲು ನಾವು ಸಿದ್ಧರಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.

ಮೇಕೆದಾಟು ಅಣೆಕಟ್ಟು ನಿರ್ಮಾಣದಿಂದ ಮಳೆ ಬಿದ್ದ ಸಂದರ್ಭದಲ್ಲಿ ವ್ಯರ್ಥವಾಗಿ ಸಮುದ್ರಕ್ಕೆ ಹರಿದು ಹೋಗುವ ನೀರನ್ನು ಶೇಖರಿಸಲು ಅನುಕೂಲವಾಗಲಿದೆ. ಅಲ್ಲದೆ, ಬೆಂಗಳೂರು ನಗರ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದ ಜನರಿಗೆ ಯೋಜನೆಯಿಂದಾಗುವ ಲಾಭದ ಬಗ್ಗೆ ಸಂಸದರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದರು.

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ 2013ರಲ್ಲಿ ಮೇಕೆದಾಟು ಯೋಜನೆಗೆ ರೂಪುರೇಷೆ ಸಿದ್ಧಪಡಿಸಿತ್ತು. ಯೋಜನೆಗೆ ಅನುಮತಿ ಕೋರಿ ಕೇಂದ್ರ ಸರಕಾರಕ್ಕೆ ಮನವಿ ಮಾಡಿತ್ತು. ಅಂದು ತಮಿಳುನಾಡು ಸಿಎಂ ಆಗಿದ್ದ ಜಯಲಲಿತಾ ಯೋಜನೆಗೆ ತಡೆ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದರು. ಹೀಗಾಗಿ ಯೋಜನೆ ಬಗ್ಗೆ ಕೇಂದ್ರ ಸರಕಾರ ಯಾವುದೇ ನಿರ್ಧಾರ ತೆಗೆದುಕೊಂಡಿರಲಿಲ್ಲ.

ಇತ್ತೀಚೆಗೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ್ದ ಸಿಎಂ ಕುಮಾರಸ್ವಾಮಿ, ಮೇಕೆದಾಟು ಯೋಜನೆ ಅಗತ್ಯತೆಯನ್ನು ಮನವರಿಕೆ ಮಾಡಿಸಿದ್ದರು. ಆ ಹಿನ್ನೆಲೆಯಲ್ಲಿ ಸ್ಪಂದಿಸಿದ ಪ್ರಧಾನಿ ಮೋದಿ ನೇತೃತ್ವದ ಸರಕಾರ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿತ್ತು. ಕೇಂದ್ರದ ಕ್ರಮವನ್ನು ಪ್ರಶ್ನಿಸಿ ತಮಿಳುನಾಡು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

ಆದರೆ, ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಮೇಕೆದಾಟು ಯೋಜನೆಗೆ ತಡೆ ನೀಡಲು ಸಾಧ್ಯವಿಲ್ಲ. ಮೇಕೆದಾಟು ಯೋಜನೆ ಸಂಬಂಧ ಕೇಂದ್ರ ಜಲ ಆಯೋಗ ಸಮಗ್ರ ಯೋಜನಾ ವರದಿ(ಡಿಪಿಆರ್)ಯನ್ನಷ್ಟೇ ಕೇಳಿದೆ. ಡಿಪಿಆರ್‌ಗೂ ಮೊದಲೇ ಯೋಜನೆಗೆ ತಡೆ ನೀಡಲು ಬರುವುದಿಲ್ಲ. ಯೋಜನಾ ವರದಿಯಲ್ಲಿ ಲೋಪವಿದ್ದರೆ ತಕರಾರು ಅರ್ಜಿ ಸಲ್ಲಿಸಿ, ಅದಕ್ಕೂ ಮೊದಲೆ ನಿಮಗೆ ಆತಂಕ ಬೇಡ ಎಂದು ಅಭಿಪ್ರಾಯ ನೀಡಿತ್ತು.

‘ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಸರಕಾರದ ಉದ್ದೇಶಿತ ಯೋಜನೆಗೆ ತಮಿಳುನಾಡಿನ ವಿರೋಧ ಸಲ್ಲ. ಈ ಯೋಜನೆ ಬಗ್ಗೆ ತಮಿಳುನಾಡು ಸಂಸದರು ಸೇರಿದಂತೆ ಎಲ್ಲರಿಗೂ ಮನವರಿಕೆ ಮಾಡಿಕೊಡಲು ನಾವು ಸಿದ್ಧ. ಅಣೆಕಟ್ಟು ನಿರ್ಮಾಣಕ್ಕೆ ಸೂಕ್ತ ಸ್ಥಳವಾಗಿದ್ದು, ಮೇಕೆದಾಟು ಯೋಜನೆ ನಮ್ಮ ಹಕ್ಕು’

-ಡಿ.ಕೆ.ಶಿವಕುಮಾರ್, ಜಲಸಂಪನ್ಮೂಲ ಸಚಿವ

‘ಕೇಂದ್ರ ಸರಕಾರ ಮೇಕೆದಾಟು ಯೋಜನೆಗೆ ಈಗಾಗಲೇ ಅಗತ್ಯ ಸಹಕಾರ ನೀಡಿರುವುದು ಸ್ವಾಗತಾರ್ಹ ಮತ್ತು ರಾಜ್ಯದ ಎಲ್ಲ ಸಂಸದರು ಪಕ್ಷಭೇದ ಮರೆತು ಕರ್ನಾಟಕದ ಅಭಿವೃದ್ಧಿ ನಿಟ್ಟಿನಲ್ಲಿ ದಿಲ್ಲಿಯಲ್ಲಿ ಕೆಲಸ ಮಾಡಬೇಕು’

-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಪಕ್ಷಭೇದ ಮರೆತು ಎಲ್ಲ ಸಂಸದರು ಒಗ್ಗಟ್ಟಿನಿಂದ ಕೈಗೊಂಡಿರುವ ತೀರ್ಮಾನಕ್ಕೆ ಬದ್ಧರಿದ್ದು, ಲೋಕಸಭೆಯಲ್ಲಿ ಧ್ವನಿ ಎತ್ತಬೇಕು. ಆ ಮೂಲಕ ಮೇಕೆದಾಟು ಮತ್ತು ಮಹದಾಯಿ ವಿಚಾರದಲ್ಲಿ ಸಂಸದರು ಒಗ್ಗಟ್ಟಿನ ಹೋರಾಟ ಮಾಡಬೇಕು’

-ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಕಾಂಗ್ರೆಸ್ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News