ನಾಳೆಯಿಂದ ಬ್ಯಾಂಕುಗಳಿಗೆ ಸಾಲು ಸಾಲಾಗಿ 5 ದಿನ ರಜೆ

Update: 2018-12-20 06:57 GMT

ಹೊಸದಿಲ್ಲಿ, ಡಿ.20: ಡಿಸೆಂಬರ್ 21ರಿಂದ ಡಿಸೆಂಬರ್ 26ರ ತನಕ ಒಂದು ದಿನ ಹೊರತುಪಡಿಸಿ ಉಳಿದ ಐದು ದಿನ ಬ್ಯಾಂಕುಗಳಿಗೆ ರಜೆಯಿರುವ ಸಾಧ್ಯತೆಯಿದೆ. ಡಿಸೆಂಬರ್ 21ರಂದು ಬ್ಯಾಂಕ್ ಅಧಿಕಾರಿಗಳ ಸಂಘ ಒಂದು ದಿನದ ಮುಷ್ಕರಕ್ಕೆ ಕರೆ ನೀಡಿದೆಯಾದರೆ, ಡಿಸೆಂಬರ್ 22 ತಿಂಗಳ ನಾಲ್ಕನೇ ಶನಿವಾರವಾದುದರಿಂದ ರಜೆಯಾಗಿದೆ. ಡಿಸೆಂಬರ್ 23 ರವಿವಾರ ಮತ್ತೊಂದು ರಜಾ. ಸೋಮವಾರ ಒಂದು ದಿನ ಬ್ಯಾಂಕುಗಳು ಎಂದಿನಂತೆ ಕಾರ್ಯಾಚರಿಸಿದರೆ, ಡಿಸೆಂಬರ್ 25ರಂದು ಕ್ರಿಸ್ಮಸ್ ರಜೆಯಾಗಿದೆ. ಡಿಸೆಂಬರ್ 26ರಂದು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಮತ್ತೊಂದು ಮುಷ್ಕರಕ್ಕೆ ಕರೆ ನೀಡಿದೆ.

ಶುಕ್ರವಾರದ ಮುಷ್ಕರಕ್ಕೆ ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಕಾನ್ಫಡರೇಶನ್ ಕರೆ ನೀಡಿದ್ದು, ವೇತನ ಪರಿಷ್ಕರಣೆಯ ಬೇಡಿಕೆಯೊಂದಿಗೆ ಈ ಮುಷ್ಕರ ನಡೆಯುತ್ತಿದೆ. ಮುಷ್ಕರ ಕೈಬಿಡುವಂತೆ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಶನ್ ಮಾಡಿರುವ ಮನವಿಗೆ ಫೋರಂ ಸ್ಪಂದಿಸಿಲ್ಲ. ದ್ವಿಪಕ್ಷೀಯ ವೇತನ ಪರಿಷ್ಕರಣೆ ಮಾತುಕತೆಗಳು ಆರಂಭಗೊಂಡು 20 ತಿಂಗಳುಗಳೇ ಕಳೆದಿದ್ದರೂ ಇನ್ನೂ ಬೇಡಿಕೆ ಪೂರೈಸುವ ಲಕ್ಷಣಗಳು ಕಾಣಿಸುತ್ತಿಲ್ಲ ಎಂದು ಫೋರಂ ಆರೋಪಿಸುತ್ತಿದೆ. ನಾಳಿನ ಮುಷ್ಕರದಲ್ಲಿ ಅಧಿಕಾರಿಗಳ ಯೂನಿಯನ್ನಿನ 3.2 ಲಕ್ಷ ಸದಸ್ಯರು ಭಾಗವಹಿಸುವ ನಿರೀಕ್ಷೆಯಿದೆ.

ಸಾಲು ಸಾಲಾಗಿ ರಜೆಗಳು ಹಾಗೂ ಮುಷ್ಕರಗಳ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಅನಾನುಕೂಲವಾಗದಿರಲೆಂದು ಎಟಿಎಂಗಳಲ್ಲಿ ಸಾಕಷ್ಟು ನಗದು ತುಂಬಿಸಲು ಕ್ರಮ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News