ನೀವು ವಾಟ್ಸ್ ಆ್ಯಪ್ ಬಳಸುತ್ತಿದ್ದರೆ ಇದನ್ನು ಓದಲೇಬೇಕು...

Update: 2018-12-21 05:17 GMT

ಹೊಸದಿಲ್ಲಿ, ಡಿ. 21: ಫೇಸ್‌ಬುಕ್ ಮಾಲಕತ್ವದ ವಾಟ್ಸ್ ಆ್ಯಪ್ ಸುಳ್ಳು ಸುದ್ದಿ ಹಾಗೂ ದ್ವೇಷ ಸಂದೇಶ ಹರಡುವ ಸುಲಭ ತಾಣವಾಗಿದ್ದು, ಸಂಘಟಿತ ಅಪರಾಧಕ್ಕೂ ಇದು ಕಾರಣವಾಗುತ್ತಿದೆ ಎಂಬ ಆರೋಪ ವ್ಯಾಪಕವಾಗಿ ಕೇಳಿಬರುತ್ತಿದೆ.

ವಿಶ್ವದಾದ್ಯಂತ ಸಂವಹನಕ್ಕೆ ಸುಲಭ ಸಾಧನವಾದ ಇದು ಭಾರತದಲ್ಲಿ ಮಾತ್ರ ಹಿಂಸೆಗೆ ಕುಮ್ಮಕ್ಕು ನೀಡುವ ತಾಣವಾಗಿ ಮಾರ್ಪಟ್ಟಿದೆ. ವಾಟ್ಸ್‌ಆ್ಯಪ್ ಸಂಪೂರ್ಣ ರಹಸ್ಯ ಚಾಟಿಂಗ್ ತಾಣ ಎಂದು ಹೇಳಿಕೊಂಡಿದ್ದರೂ, ಇದು ಸಂಗ್ರಹಿಸುವ ಬಳಕೆದಾರರ ಮಾಹಿತಿಗಳನ್ನು ಕಾನೂನು ಜಾರಿ ಏಜೆನ್ಸಿಗಳು ಬಯಸಿದಲ್ಲಿ ನೀಡುವುದು ಕಡ್ಡಾಯ. ನಿಮ್ಮ ಹೆಸರು, ವಿಳಾಸ, ಮೊಬೈಲ್‌ಸಂಖ್ಯೆ, ಸ್ಥಳ, ಮೊಬೈಲ್ ನೆಟ್‌ವರ್ಕ್ ಮತ್ತು ನಿಮ್ಮ ಮೊಬೈಲ್ ಹ್ಯಾಂಡ್‌ಸೆಟ್ ಯಾವ ಸ್ವರೂಪದ್ದು ಎಂಬ ಮಾಹಿತಿಯನ್ನು ಹಂಚಿಕೊಳ್ಳಬೇಕಾಗುತ್ತದೆ.

ನಿಮ್ಮ ದೂರವಾಣಿ ಸಂಖ್ಯೆಯನ್ನೂ ಪೊಲೀಸರು ಪಡೆಯಬಹುದಾಗಿದೆ. ಯಾರೊಂದಿಗೆ, ಎಷ್ಟು ಕಾಲ ಯಾವಾಗ ಚಾಟ್ ಮಾಡಿದ್ದೀರಿ ಎಂಬ ಮಾಹಿತಿಯೂ ಪೊಲೀಸರಿಗೆ ಸಿಗುತ್ತದೆ. ವಾಟ್ಸ್‌ಆ್ಯಪ್‌ಗೆ ಭಾರತದಲ್ಲಿ ಪ್ರತ್ಯೇಕ ಕಾನೂನು ಇಲ್ಲದಿರುವುದರಿಂದ ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ಅನ್ವಯ ಈ ಕೆಳಗಿನ ಸಂದರ್ಭದಲ್ಲಿ ಪೊಲೀಸರು ನಿಮ್ಮನ್ನು ಬಂಧಿಸಬಹುದಾಗಿದೆ.

ವಾಟ್ಸ್‌ಆ್ಯಪ್ ಗುಂಪಿನ ಯಾವ ಸದಸ್ಯರೂ ಬೇಜವಾಬ್ದಾರಿಯುತವಾಗಿ ವರ್ತಿಸಿದರೆ ಅಡ್ಮಿನ್‌ಗಳನ್ನು ಬಂಧಿಸಬಹುದು. ಇದರ ಮೂಲಕ ವೇಶ್ಯಾವಾಟಿಕೆ ನಡೆಸುವುದು ಅಥವಾ ಕುಮ್ಮಕ್ಕು ನೀಡುವುದು, ಪ್ರಮುಖ ವ್ಯಕ್ತಿಗಳ ಚಿತ್ರ ವಿರೂಪಗೊಳಿಸಿ ಪ್ರಸಾರ ಮಾಡುವುದು, ಮಹಿಳೆಯರಿಗೆ ಕಿರುಕುಳ ನೀಡುವುದು, ಬೇರೆಯವರ ವಾಟ್ಸ್ ಆ್ಯಪ್ ಖಾತೆಯನ್ನು ಬಳಸುವುದು, ಯಾವುದೇ ಧಾರ್ಮಿಕ ಸ್ಥಳವನ್ನು ಅವಹೇಳನ ಮಾಡುವ ಸಂದೇಶ ರವಾನಿಸುವುದು, ಸುಳ್ಳು ಸುದ್ದಿ ಹರಡುವುದು, ನಿಷೇಧಿತ ವಸ್ತುಗಳು ಹಾಗೂ ಡ್ರಗ್ಸ್ ಮಾರಾಟ ಅಥವಾ ಪ್ರಚಾರ, ಕಾನೂನುಬಾಹಿರವಾಗಿ ಸೆರೆಹಿಡಿದ ವೀಡಿಯೊ ತುಣುಕು ಪ್ರಸಾರ ಮಾಡುವುದು, ಅಶ್ಲೀಲ ಅಂಶಗಳನ್ನು ಪ್ರಸಾರ ಮಾಡುವುದು ಅಪರಾಧವಾಗಿದ್ದು, ಪೊಲೀಸರು ತಕ್ಷಣ ಬಂಧಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News