ಶೇರು ಮಾರುಕಟ್ಟೆಯಲ್ಲಿ ರಕ್ತಪಾತ: 689 ಅಂಶಗಳಷ್ಟು ಕುಸಿದ ಸೆನ್ಸೆಕ್ಸ್

Update: 2018-12-21 17:44 GMT

ಮುಂಬೈ,ಡಿ.21: ಜಾಗತಿಕ ಆರ್ಥಿಕ ಹಿಂಜರಿಕೆಯ ನಕಾರಾತ್ಮಕ ಸಂಕೇತಗಳು,ಹೆಚ್ಚುತ್ತಿರುವ ಅಮೆರಿಕದ ಸಾಲ ವೆಚ್ಚಗಳು ಹಾಗೂ ಅಮೆರಿಕ-ಚೀನಾ ನಡುವೆ ತೀವ್ರಗೊಳ್ಳುತ್ತಿರುವ ವ್ಯಾಪಾರ ಸಮರದಿಂದಾಗಿ ದುರ್ಬಲಗೊಂಡಿರುವ ವಿಶ್ವ ಮಾರುಕಟ್ಟೆ,ಶೇರುಗಳ ಮಾರಾಟದ ಭರಾಟೆ ಮತ್ತು ಹೂಡಿಕೆದಾರರಿಂದ ಲಾಭದ ನಗದೀಕರಣ ಇವು ಶುಕ್ರವಾರ ಭಾರತೀಯ ಶೇರು ಮಾರುಕಟ್ಟೆಗಳಲ್ಲಿ ಭಾರೀ ಹಿನ್ನಡೆಗೆ ಕಾರಣವಾಗಿದ್ದು,ಸೂಚ್ಯಂಕಗಳು ಶೇ.1.8ಕ್ಕೂ ಹೆಚ್ಚಿನ ಕುಸಿತವನ್ನು ದಾಖಲಿಸಿವೆ. ಕಳೆದ ಕೆಲವು ದಿನಗಳಿಂದ ಏರುಗತಿಯಲ್ಲಿದ್ದ ಬಾಂಬೆ ಶೇರು ವಿನಿಮಯ ಕೇಂದ್ರ (ಬಿಎಸ್‌ಇ)ದ ಸೂಚ್ಯಂಕ ಸೆನ್ಸೆಕ್ಸ್ 689.69(ಶೇ.1.89) ಕುಸಿತ ಕಂಡು 35,742.07ರಲ್ಲಿ ಮುಕ್ತಾಯಗೊಂಡರೆ ಅತ್ತ ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ(ಎನ್‌ಎಸ್‌ಇ)ದ ಸೂಚ್ಯಂಕ 197.70(ಶೇ.1.81) ಅಂಶಗಳಷ್ಟು ಪತನಗೊಂಡು 10,754ಕ್ಕೆ ದಿನದಾಟವನ್ನು ಮುಗಿಸಿದೆ.

ಸೆನ್ಸೆಕ್ಸ್ ಈ ವಾರದಲ್ಲಿ ಒಟ್ಟಾರೆಯಾಗಿ 220.86 ಅಂಶಗಳನ್ನು ಮತ್ತು ನಿಫ್ಟಿ 51.45 ಅಂಶಗಳನ್ನು ಕಳೆದುಕೊಂಡಿವೆ.

ಶುಕ್ರವಾರದ ವಹಿವಾಟಿನ ಒಂದು ಹಂತದಲ್ಲಿ ಸೆನ್ಸೆಕ್ಸ್ 736.93 ಅಂಶಗಳನ್ನು ಕಳೆದುಕೊಂಡು ದಿನದ ಕನಿಷ್ಠ ಮಟ್ಟವನ್ನು ದಾಖಲಿಸಿದ್ದರೆ,ನಿಫ್ಟಿ 213.05 ಅಂಶಗಳಷ್ಟು ಕುಸಿತವನ್ನು ಕಂಡಿತ್ತು.

 ಜಾಗತಿಕ ಮಾರುಕಟ್ಟೆೆಗಳ ದುರ್ಬಲ ಸಂಕೇತಗಳ ನಡುವೆ ಹೂಡಿಕೆದಾರರು ಲಾಭದ ನಗದೀಕರಣಕ್ಕಾಗಿ ಐಟಿ,ವಾಹನ,ಹಣಕಾಸು,ರಿಯಾಲ್ಟಿ ಕ್ಷೇತ್ರಗಳಲ್ಲಿಯ ಶೇರುಗಳನ್ನು ಭಾರೀ ಪ್ರಮಾಣದಲ್ಲಿ ಮಾರಾಟ ಮಾಡಿದರು.

ತನ್ಮಧ್ಯೆ ಶುಕ್ರವಾರ ರೂಪಾಯಿ ಅಮೆರಿಕದ ಡಾಲರ್‌ನೆದುರು 52 ಪೈಸೆಗಳಷ್ಟು ಕುಸಿದು 70.22ನ್ನು ತಲುಪಿದ್ದು,ಬಳಿಕ 70.14ಕ್ಕೆ ಚೇತರಿಸಿಕೊಂಡಿದೆ. ಡಾಲರ್‌ನೆದುರು ರೂಪಾಯಿಯ ತೀವ್ರ ಕುಸಿತವು ಐಟಿ ಕ್ಷೇತ್ರಗಳ ಶೇರುಗಳ ಭರಾಟೆಯ ಮಾರಾಟಕ್ಕೆ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News