ಸರ್ಕಾರಿ ಬ್ಯಾಂಕ್‌ಗಳು ಕಳೆದ ಮೂರೂವರೆ ವರ್ಷಗಳಲ್ಲಿ ನಿಮ್ಮ ಜೇಬಿಗೆ ಕತ್ತರಿ ಹಾಕಿದ್ದೆಷ್ಟು ಗೊತ್ತೇ?

Update: 2018-12-22 03:42 GMT

ಹೊಸದಿಲ್ಲಿ, ಡಿ.22: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಕಳೆದ ಮೂರೂವರೆ ವರ್ಷಗಳಲ್ಲಿ ನಿಮ್ಮ ಜೇಬಿಗೆ ಕತ್ತರಿ ಹಾಕಿ 10 ಸಾವಿರ ಕೋಟಿ ರೂಪಾಯಿಯನ್ನು ವಸೂಲಿ ಮಾಡಿವೆ ಎಂದು ಸರ್ಕಾರ ಸಂಸತ್ತಿನಲ್ಲಿ ಮಂಡಿಸಿದ ಅಂಕಿ ಅಂಶಗಳಿಂದ ಬಹಿರಂಗವಾಗಿದೆ.

ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಉಳಿಸಿಕೊಳ್ಳದಿರುವುದು ಹಾಗೂ ಎಟಿಎಂಗಳಿಂದ ಹಣ ಪಡೆಯುವಾಗ ವಿಧಿಸಿದ ವಿಶೇಷ ಸುಂಕ ಇದರಲ್ಲಿ ಸೇರಿದೆ. ಎಟಿಎಂಗಳಿಂದ ಉಚಿತವಾಗಿ ಹಣ ಪಡೆಯುವ ಮಿತಿಯನ್ನು ಮೀರಿ ಹಣ ಪಡೆದಾಗ ಶುಲ್ಕ ವಿಧಿಸಲಾಗುತ್ತದೆ.

ಕನಿಷ್ಠ ಮಾಸಿಕ ಬ್ಯಾಲೆನ್ಸ್ ನಿರ್ವಹಿಸದೇ ಇರುವುದಕ್ಕಾಗಿ ಎಸ್‌ಬಿಐ 2012ರವರೆಗೆ ದಂಡ ವಿಧಿಸುತ್ತಿತ್ತು. ಆದರೆ 2016ರ ಮಾರ್ಚ್ 31ರವರೆಗೆ ಅದನ್ನು ಸ್ಥಗಿತಗೊಳಿಸಿತು. ಆದರೆ ಖಾಸಗಿ ಬ್ಯಾಂಕ್‌ಗಳು ಸೇರಿದಂತೆ ಇತರ ಬ್ಯಾಂಕ್‌ಗಳು ತಮ್ಮ ಆಡಳಿತ ಮಂಡಳಿ ಅಂಗೀಕರಿಸಿದ ಪ್ರಮಾಣದಷ್ಟು ದಂಡ ವಿಧಿಸುತ್ತಿದ್ದವು. 2017ರ ಎಪ್ರಿಲ್ 1ರಿಂದ ಎಸ್‌ಬಿಐ ಇದನ್ನು ಪುನರಾರಂಭಿಸಿತು. 2017ರ ಅಕ್ಟೋಬರ್ 1ರಿಂದೀಚೆಗೆ ಕನಿಷ್ಠ ಬ್ಯಾಲೆನ್ಸ್ ಅಗತ್ಯತೆಯನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ.

ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸದೇ ಇರುವುದಕ್ಕಾಗಿ ಸರ್ಕಾರಿ ಬ್ಯಾಂಕ್‌ಗಳು ಖಾತೆದಾರರಿಂದ 6,246 ಕೋಟಿ ರೂಪಾಯಿ ಸಂಗ್ರಹಿಸಿದ್ದರೆ, ಎಟಿಎಂ ಶುಲ್ಕವಾಗಿ 4,145 ಕೋಟಿ ರೂಪಾಯಿ ವಸೂಲಿ ಮಾಡಿದ್ದು, ಒಟ್ಟು 10,391 ಕೋಟಿ ರೂಪಾಯಿ ಸಂಗ್ರಹಿಸಿವೆ. ಎಸ್‌ಬಿಐ 2,894 ಕೋಟಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ 493 ಕೋಟಿ, ಕೆನರಾ ಬ್ಯಾಂಕ್ 352 ಕೋಟಿ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 348 ಕೋಟಿ ಹಾಗೂ ಬ್ಯಾಂಕ್ ಆಫ್ ಬರೋಡಾ 328 ಕೋಟಿ ರೂಪಾಯಿ ವಸೂಲಿ ಮಾಡಿದ್ದು, ಗರಿಷ್ಠ ದಂಡ ವಿಧಿಸಿದ ಬ್ಯಾಂಕ್‌ಗಳೆನಿಸಿಕೊಂಡಿವೆ.

ಎಟಿಎಂ ಶುಲ್ಕ ವಸೂಲಿಯಲ್ಲೂ ಎಸ್‌ಬಿಐ ಮುಂಚೂಣಿಯಲ್ಲಿದ್ದು, ತನ್ನ ಗ್ರಾಹಕರಿಂದ 1,554 ಕೋಟಿ ರೂಪಾಯಿ ವಸೂಲಿ ಮಾಡಿದೆ. ಬ್ಯಾಂಕ್ ಆಫ್ ಇಂಡಿಯಾ (464 ಕೋಟಿ ರೂ.), ಪಂಜಾಬ್ ನ್ಯಾಷನಲ್ ಬ್ಯಾಂಕ್ (323 ಕೋ.ರೂ.), ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (241 ಕೋ.ರೂ.) ಮತ್ತು ಬ್ಯಾಂಕ್ ಆಫ್ ಬರೋಡಾ (183 ಕೋ.ರೂ.) ನಂತರದ ಸ್ಥಾನಗಳಲ್ಲಿವೆ ಎಂದು ಲೋಕಸಭೆಯಲ್ಲಿ ನೀಡಲಾದ ಲಿಖಿತ ಉತ್ತರದಲ್ಲಿ ಹೇಳಲಾಗಿದೆ. ಆದರೆ ಖಾಸಗಿ ಬ್ಯಾಂಕ್‌ಗಳು ವಿಧಿಸಿದ ಇಂಥ ಶುಲ್ಕದ ವಿವರ ಸರ್ಕಾರದ ಬಳಿ ಲಭ್ಯವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News