ಎಚ್ಚರಿಕೆ... ಸಮುದ್ರ ಮಟ್ಟ ಹೆಚ್ಚುತ್ತಿದೆ!

Update: 2018-12-22 03:48 GMT

ಹೊಸದಿಲ್ಲಿ, ಡಿ.22: ಭಾರತದಲ್ಲಿ ಸಮುದ್ರಮಟ್ಟ ಏರಿಕೆ ಬಗ್ಗೆ ನಡೆಸಿದ ಅಧ್ಯಯನಗಳು ಕೂಡಾ, ಹವಾಮಾನ ವೈಪರೀತ್ಯದಿಂದಾಗಿ ದೊಡ್ಡ ಸಂಖ್ಯೆಯ ಜನ ಪ್ರವಾಹದ ಅಪಾಯಕ್ಕೆ ತುತ್ತಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿವೆ.

ಬಂಗಾಳ ಕೊಲ್ಲಿಗೆ ಹರಿಯುವ ನದಿ ವ್ಯವಸ್ಥೆಗಳೂ ಅಪಾಯದ ಅಂಚಿನಲ್ಲಿವೆ. ನೀರಿನ ಬೇಡಿಕೆ ಕೂಡಾ ಹೆಚ್ಚುತ್ತಿದ್ದು, 2050ರ ವೇಳೆಗೆ ದಕ್ಷಿಣ ಹಾಗೂ ಕೇಂದ್ರ ಭಾರತದಲ್ಲಿ ನೀರು ಸರಬರಾಜು ಮಟ್ಟ ಕುಸಿಯುವ ಅತಂಕವನ್ನು ಯುನೆಸ್ಕೊ ವರದಿ ವ್ಯಕ್ತಪಡಿಸಿದೆ.

"ಗಂಗಾ, ಕೃಷ್ಣಾ, ಗೋದಾವರಿ, ಕಾವೇರಿ ಹಾಗೂ ಮಹಾನದಿ ಹೀಗೆ ಪೂರ್ವಾಭಿಮುಖವಾಗಿ ಹರಿಯುವ ನದಿಗಳ ಮುಖಜಭೂಮಿ ಪ್ರದೇಶದಲ್ಲಿ ಜನವಸತಿ, ನೀರಾವರಿ ಜಮೀನು ಹಾಗೂ ನಗರಗಳು ಇದ್ದು, ಇವುಗಳಿಗೆ ಅಪಾಯ ಸಾಧ್ಯತೆ ಇದೆ" ಎಂದು ಸರ್ಕಾರ ಹೇಳಿದೆ. ಉತ್ತರದ ಗಂಗಾನದಿ ಬಯಲು ಪ್ರದೇಶ ಹಾಗೂ ದಖ್ಖನ್ ಪ್ರಸ್ಥಭೂಮಿಯ ಜಲ ಸಂಪನ್ಮೂಲಕ್ಕೆ ಅಪಾಯವಿದೆ ಎಂದು ಪರಿಸರ ಖಾತೆ ರಾಜ್ಯ ಸಚಿವ ಮಹೇಶ್ ಶರ್ಮಾ ಲೋಕಸಭೆಯಲ್ಲಿ ತಿಳಿಸಿದರು. ಜಾಗತಿಕ ತಾಪಮಾನ ಏರಿಕೆಯಿಂದ ಭಾರತದಲ್ಲಿ ಸಮುದ್ರಮಟ್ಟ ಏರಿಕೆ ಹಾಗೂ ಕರಾವಳಿ ಪ್ರದೇಶಗಳಿಗೆ ಇರುವ ಅಪಾಯ ಬಗ್ಗೆ ಕೇಳಿದ ಪ್ರಶ್ನೆಗೆ ಸಚಿವರು ಲಿಖಿತ ಉತ್ತರ ನೀಡಿದರು.

ಸಮುದ್ರ ಮಟ್ಟ ಏರಿಕೆಯಿಂದಾಗಿ ಕರಾವಳಿ ಪ್ರದೇಶದ ಅಂತರ್ಜಲ ಜವಳು ಆಗುವ ಸಾಧ್ಯತೆ ಇದೆ. ಇದರಿಂದ ಜೌಗುಭೂಮಿಗೆ ಅಪಾಯವಿದ್ದು, ಕರಾವಳಿಯ ಅಮೂಲ್ಯಭೂಮಿ ಹಾಗೂ ಕರಾವಳಿ ಸಮುದಾಯಗಳಿಗೆ ಅಪಾಯವಿದೆ. ಇದನ್ನು ತಡೆಯುವ ಕ್ರಮಗಳಿಗೆ ಸರ್ಕಾರ ಬದ್ಧವಾಗಿದೆ ಎಂದು ಅವರು ವಿವರಿಸಿದರು.

ದೇಶದಲ್ಲಿ ಸರಾಸರಿ ಸಮುದ್ರಮಟ್ಟ 2.8 ಅಡಿಯಷ್ಟು ಹೆಚ್ಚಲಿದ್ದು, ಮುಂಬೈ, ಗುಜರಾತ್‌ನ ಖಂಬತ್, ಕಛ್, ಕೊಂಕಣ ಕರಾವಳಿ ಮತ್ತು ದಕ್ಷಿಣ ಕೇರಳಕ್ಕೆ ಅಪಾಯವಾಗಲಿದೆ. ಭಾರತ ಈಗಾಗಲೇ ಈ ಸಂಭಾವ್ಯ ಏರಿಕೆ ಬಗ್ಗೆ ವಿಶ್ವಸಂಸ್ಥೆಯ ಹವಾಮಾನ ಸಂಸ್ಥೆಗೆ ವರದಿ ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News