ಮೀ ಟೂ ಅಭಿಯಾನ: ‘ಅಹಿತಕರ’ ಕೆಲಸದ ಸ್ಥಳಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ 250ಕ್ಕೂ ಅಧಿಕ ಕಲಾವಿದರು

Update: 2018-12-22 16:42 GMT

ಹೊಸದಿಲ್ಲಿ,ಡಿ.22: ಹೆಚ್ಚುತ್ತಿರುವ ಲೈಂಗಿಕ ಕಿರುಕುಳ ಆರೋಪಗಳು ಮತ್ತು ‘ಅಹಿತಕರ’ ಕೆಲಸದ ಪರಿಸರಗಳ ಕುರಿತು ಕಳವಳವನ್ನು ವ್ಯಕ್ತಪಡಿಸಿರುವ 265 ಗಣ್ಯ ಕಲಾವಿದರು,ಕ್ಯುರೇಟರ್‌ಗಳು,ಕಲಾ ಗ್ಯಾಲರಿಗಳ ನಿರ್ವಾಹಕರು, ಸಂಗ್ರಹಕಾರರು ಮತ್ತು ಲೇಖಕರು ದಕ್ಷಿಣ ಏಷ್ಯಾ ಕಲಾ ಸಮುದಾಯದಲ್ಲಿ ಸುರಕ್ಷಿತ ಸ್ಥಳಗಳಿಗಾಗಿ ಆಗ್ರಹಿಸಿದ್ದಾರೆ.

ಕಲಾವಿದರಾದ ಅರಿಜಿತ್ ಸೇನ್,ಸುದರ್ಶನ ಶೆಟ್ಟಿ,ಜಿತೇನ್ ಥುಕ್ರಾಲ್ ಮತ್ತು ಸುಮೀರ್ ತಗ್ರಾ,ಗ್ಯಾಲರಿಯಿಸ್ಟ್‌ಗಳಾದ ಶಿರೀನ್ ಗಾಂಧಿ,ಪ್ರಿಯಾಂಕಾ ಮತ್ತು ಪ್ರತೀಕ ರಾಜಾ,ಲೇಖಕರಾದ ನೀಲಾಂಜನ ಎಸ್.ರಾಯ್ ಮತ್ತು ಊರ್ವಶಿ ಬುಟಾಲಿಯಾ ಮತ್ತಿತರರು ವೃತ್ತಿಪರ ಮತ್ತು ವ್ಯಕ್ತಿಗತ ಸ್ಥಾನಗಳನ್ನು ಸುಲಭವಾಗಿ ಪ್ರತ್ಯೇಕಿಸಲಾಗದ ಅಸಂಘಟಿತ ಕಲಾ ಜಗತ್ತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವ ಅಗತ್ಯವಿದೆ ಎಂದು ಶನಿವಾರ ಜಂಟಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ದಕ್ಷಿಣ ಏಷ್ಯಾ ಕಲಾ ಸಮುದಾಯದ ಸಕ್ರಿಯ ಪಾಲುದಾರರಾಗಿ ನಾವು ಹೆಚ್ಚುತ್ತಿರುವ ಲೈಂಗಿಕ ಕಿರುಕುಳದ ಆರೋಪಗಳು ಮತ್ತು ಅಹಿತಕರ ಕೆಲಸದ ಪರಿಸರಗಳ ಬಗ್ಗೆ ಕಳವಳಗೊಂಡಿದ್ದೇವೆ ಎಂದಿರುವ ಅವರು,ಕಿರುಕುಳಗಳಿಂದ ಪಾರಾದವರನ್ನು ಗೇಲಿ ಮಾಡುವುದನ್ನು ಖಂಡಿಸಿದ್ದಾರೆ. ಅವರ ಸುರಕ್ಷತೆ ಮತ್ತು ಬೆಂಬಲಕ್ಕೆ ಈ ಕಲಾವಿದರು ಕರೆ ನೀಡಿದ್ದಾರೆ.

ಲೈಂಗಿಕ ಕಿರುಕುಳದ ಅನುಭವಗಳನ್ನು ಬಹಿರಂಗವಾಗಿ ಹೇಳಿಕೊಳ್ಳುವವರು ತೀವ್ರ ಪ್ರತೀಕಾರವನ್ನು ಎದುರಿಸುವಂತಾಗಿದೆ. ತಮ್ಮ ಕೆಲಸಗಳನ್ನು ಕಳೆದುಕೊಳ್ಳುವ ಭೀತಿಯಿಂದಾಗಿ ಅವರು ತಮ್ಮ ಗುರುತುಗಳನ್ನು ಬಹಿರಂಗಪಡಿಸಲು ಹಿಂಜರಿಯುತ್ತಿದ್ದಾರೆ ಎಂದಿರುವ ಈ ಕಲಾವಿದರು,ಒಂದು ಸಮುದಾಯವಾಗಿ ತಮ್ಮ ನೋವುಗಳನ್ನು ಬಹಿರಂಗವಾಗಿ ತೋಡಿಕೊಳ್ಳುವವರ ರಕ್ಷಣೆಗೆ ಮತ್ತು ಅವರಿಗೆ ಅವಕಾಶಗಳ ನಿರಾಕರಣೆಯಾಗದಂತೆ ನೋಡಿಕೊಳ್ಳಲು ನಾವು ಬದ್ಧರಾಗಿದ್ದೇವೆ ಎಂದಿದ್ದಾರೆ. ಇಂತಹವರನ್ನು ಬೆದರಿಸಲು ಮಾನನಷ್ಟ ಅಸ್ತ್ರದ ಬಳಕೆಯಾಗುತ್ತಿರುವುದನ್ನು ಅವರು ಬಲವಾಗಿ ಆಕ್ಷೇಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News