ಪ್ರತಿಭಟನೆಯ ನಡುವೆ ಅಯ್ಯಪ್ಪ ದರ್ಶನಕ್ಕೆ ಹೊರಟ 11 ಮಹಿಳೆಯರು: ಪರಿಸ್ಥಿತಿ ಮತ್ತೆ ಉದ್ವಿಗ್ನ

Update: 2018-12-23 07:22 GMT

ಶಬರಿಮಲೆ, ಡಿ.23:  ಚೆನ್ನೈ ಮೂಲದ ಮಹಿಳಾ ಸಂಘಟನೆಯ 11 ಸದಸ್ಯರು ಕೇರಳದ ಶಬರಿಮಲೆ ದೇಗುಲ ಪ್ರವೇಶಿಸಲು  ಸಜ್ಜಾಗಿದ್ದು, ಪ್ರತಿಭಟನಾ ನಿರತ ಭಕ್ತರು ಅವರನ್ನು ತಡೆದ ಪರಿಣಾಮ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ನೇರ ಮಾರ್ಗದಲ್ಲಿ ತೆರಳಿದರೆ ಅಯ್ಯಪ್ಪ ಭಕ್ತರಿಂದ ತಡೆ ಬೀಳುತ್ತದೆ ಎಂಬ ಕಾರಣಕ್ಕೆ ಕಾಡುದಾರಿ ಮೂಲಕ ದೇವಾಲಯ ಪ್ರವೇಶಿಸಲು ಮುಂದಾಗಿದ್ದರು. ಆದರೆ, ಅಯ್ಯಪ್ಪ ದೇವಾಲಯದ 5 ಕಿ.ಮೀ. ದೂರದಲ್ಲೇ ಅವರನ್ನು ತಡೆಯಲಾಯಿತು. ಈ ವೇಳೆ ಭಕ್ತರು ಘೋಷಣೆಯನ್ನು ಕೂಗುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದರು.

ಮಹಿಳಾ ಭಕ್ತರಿಗೆ ಅಯ್ಯಪ್ಪ ದೇಗುಲ ಪ್ರವೇಶಿಸಲು ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಹೇಳುತ್ತಿದ್ದಾರೆ. ದರ್ಶನ ಪಡೆಯದೇ ನಾವು ವಾಪಸಾಗುವುದಿಲ್ಲ ಎಂದು ಮಹಿಳಾ ಭಕ್ತರು ಹೇಳುತ್ತಿದ್ದಾರೆ.

ವಿಚಾರ ತಿಳಿಯುತ್ತಿದ್ದಂತೆ ದೇವಸ್ಥಾನದ ಸಮೀಪ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುತ್ತಿದ್ದಾರೆ. ಮಹಿಳೆಯರನ್ನು ದೇವಾಲಯಕ್ಕೆ ಹೋಗದಂತೆ ತಡೆಯಲಾಗುತ್ತಿದೆ. ಸದ್ಯ ಈ ಮಹಿಳೆಯರಿಗೆ ಪೊಲೀಸರು ರಕ್ಷಣೆ ನೀಡುತ್ತಿದ್ದಾರೆ. ಹಾಗಾಗಿ ಶಬರಿಮಲೆಯಲ್ಲಿ ಮತ್ತೆ ಉದ್ವಿಗ್ನ ವಾತಾವರಣ ಸೃಷ್ಟಿಯಾಗುವ ಲಕ್ಷಣ ಗೋಚರಿಸುತ್ತಿದೆ.

ಮಹಿಳೆಯರಿಗೆ ಶಬರಿಮಲೆ ಪ್ರವೇಶಿಸಲು ಸುಪ್ರೀಂಕೋರ್ಟ್ ಅನುಮತಿ ನೀಡಿ ತೀರ್ಪು ನೀಡಿದ್ದರೂ ಅಯ್ಯಪ್ಪ ಭಕ್ತರು ಪ್ರತಿಭಟನೆ ನಡೆಸುವ ಮೂಲಕ ಪ್ರವೇಶಕ್ಕೆ ಅಡ್ಡಿಪಡಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News