ದೋಷಮುಕ್ತಗೊಂಡರೂ ನಿರ್ಬಂಧದಲ್ಲೇ ಕ್ರಿಸ್ಮಸ್ ಆಚರಿಸಲಿರುವ ಆಸಿಯಾ ಬೀಬಿ

Update: 2018-12-23 18:27 GMT

ಇಸ್ಲಾಮಾಬಾದ್, ಡಿ. 23: ದೇವನಿಂದನೆ ಪ್ರಕರಣದಿಂದ ದೋಷಮುಕ್ತಗೊಂಡಿರುವ ಹೊರತಾಗಿಯೂ, ಪಾಕಿಸ್ತಾನದ ಕ್ರೈಸ್ತ ಮಹಿಳೆ ಆಸಿಯಾ ಬೀಬಿ ನಿರ್ಬಂಧದಡಿಯಲ್ಲೇ ಕ್ರಿಸ್ಮಸ್ ಆಚರಿಸಬೇಕಾಗಿದೆ.

ಎಂಟು ವರ್ಷಗಳ ಕಾಲ ಗಲ್ಲು ಶಿಕ್ಷೆ ಎದುರು ನೋಡುತ್ತಾ ಜೈಲಿನಲ್ಲಿದ್ದ ಕಾರ್ಮಿಕ ಮಹಿಳೆ ಆಸಿಯಾರನ್ನು ಎರಡು ತಿಂಗಳ ಹಿಂದೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ದೇವನಿಂದನೆ ಆರೋಪದಿಂದ ಮುಕ್ತಗೊಳಿಸಿರುವುದನ್ನು ಸ್ಮರಿಸಬಹುದಾಗಿದೆ.

ಸುಪ್ರೀಂ ಕೋರ್ಟ್‌ನ ಈ ತೀರ್ಪನ್ನು ಪ್ರಶ್ನಿಸಿ ತೀವ್ರವಾದಿಗಳು ದೇಶಾದ್ಯಂತ ಭಾರೀ ಪ್ರತಿಭಟನೆ ಮಾಡಿದ್ದರು.

ಹಾಗಾಗಿ, ಅವರ ಜೀವಕ್ಕೆ ಅಪಾಯವಿರುವುದನ್ನು ಮನಗಂಡ ಪಾಕಿಸ್ತಾನ ಸರಕಾರ ಅವರನ್ನು ಗುಪ್ತ ಸ್ಥಳವೊಂದರಲ್ಲಿ ಇರಿಸಿದೆ.

ಕ್ರಿಸ್ಮಸ್ ಸಂದರ್ಭದಲ್ಲಿ ಸರಕಾರ ಈ ಬಾರಿ ಹೆಚ್ಚಿನ ಬಂದೋಬಸ್ತ್ ಮಾಡಿದೆ. ಕ್ರೈಸ್ತ ಕಾಲನಿಗಳಲ್ಲಿ ಸರಕಾರ ಭದ್ರತಾ ಪಡೆಗಳನ್ನು ನಿಯೋಜಿಸಿದೆ.

ಆಸಿಯಾ ಬೀಬಿಯನ್ನು ಬಿಡುಗಡೆಗೊಳಿಸಿರುವ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಲಾಗಿದೆ. ಅದರ ವಿಚಾರಣೆ ಮುಗಿಯುವವರೆಗೆ ಆಸಿಯಾರನ್ನು ಪಾಕಿಸ್ತಾನ ಸರಕಾರವು ಸುರಕ್ಷಿತ ಕಸ್ಟಡಿಯಲ್ಲಿ ಇರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News