ಮೋದಿಗೆ ಪಕ್ಷದ ಕಾರ್ಯಕರ್ತರು ಕೇಳುವ ಪ್ರಶ್ನೆಗಳಿಗೆ ಬಿಜೆಪಿ ಫಿಲ್ಟರ್ !

Update: 2018-12-24 09:24 GMT

ಚೆನ್ನೈ, ಡಿ.24: ಕೆಲ ದಿನಗಳ ಹಿಂದೆ ಪ್ರಧಾನಿ ಮೋದಿ ಜತೆಗಿನ ನೇರ ಸಂವಾದ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರೊಬ್ಬರು `ಮಧ್ಯಮ ವರ್ಗದ ಜನತೆಯ ಮೇಲಿನ ತೆರಿಗೆ ಹೊರೆ' ಬಗ್ಗೆ ಕೇಳಿದ ಪ್ರಶ್ನೆ ಪ್ರಧಾನಿಗೆ ಬಹಳಷ್ಟು ಮುಜುಗರ ಸೃಷ್ಟಿಸಿದ ನಂತರ ಪ್ರಧಾನಿ ಕಾರ್ಯಾಲಯ `ಮೈ ಬೂತ್ ಈಸ್ ಎ ಸ್ಟ್ರಾಂಗ್' ಬೂತ್ ಸಂವಾದ ಕಾರ್ಯಕ್ರಮಗಳಿಗೆ ಬರುವ ಪ್ರಶ್ನೆಗಳನ್ನು ಆಯ್ಕೆ ಮಾಡುವಲ್ಲಿ ಇನ್ನಷ್ಟು ಎಚ್ಚರಿಕೆ ವಹಿಸಲು ಕ್ರಮ ಕೈಗೊಂಡಿದೆ.

ಪುದುಚೇರಿಯಲ್ಲಿ ನಡೆದ ಈ ನೇರ ಸಂವಾದ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತ ನಿರ್ಮಲ್ ಕುಮಾರ್ ಜೈನ್ ಎಂಬವರು  ಸರಕಾರವು ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ತೆರಿಗೆ ವಿಧಿಸಿ ಅವರಿಗೆ ಏಕೆ ಹೊರೆ ಸೃಷ್ಟಿಸುತ್ತಿದೆ ಎಂದು ಪ್ರಶ್ನಿಸಿದ್ದರು. ಇನ್ನು ಮುಂದೆ ಪ್ರಶ್ನೆ ಕೇಳುವ ಕಾರ್ಯಕರ್ತರು ಹಾಗೂ ಅವರ ಪ್ರಶ್ನೆಗಳ ಬಗ್ಗೆ ಇನ್ನೂ ಹೆಚ್ಚಿನ ನಿಗಾ ವಹಿಸಲಾಗುವುದೆಂದು ತಿಳಿದು ಬಂದಿದೆ.

ಇನ್ನು ಮುಂದೆ ಪ್ರಧಾನಿಗೆ ಪ್ರಶ್ನೆ ಕೇಳಲು ಬಯಸುವ ಕಾರ್ಯಕರ್ತರು ಅದರ ವೀಡಿಯೋ ತೆಗೆದು ಪ್ರತಿ ರವಿವಾರ ನಡೆಯುವ ಕಾರ್ಯಕ್ರಮದ ಎರಡು ದಿನಗಳ ಮುಂಚಿತವಾಗಿ ಕಳುಹಿಸಬೇಕಿದೆ. ಪ್ರಧಾನಿಯ ಈ ನೇರ ಸಂವಾದಕ್ಕೆ ಪ್ರತಿ ಕ್ಷೇತ್ರದಿಂದ 500ರಿಂದ 1000 ಪ್ರಶ್ನೆಗಳು ಬರುತ್ತಿವೆ. ಪ್ರಶ್ನೆ ಕೇಳ ಬಯಸುವವರು ಗೂಗಲ್ ಫಾರ್ಮಾಟ್ ಫಾರ್ಮ್ ತುಂಬಿ ತಮ್ಮ ಬಗ್ಗೆ ಹಾಗೂ ತಾವು ಕೇಳಲು ಇಚ್ಛಿಸುವ ಪ್ರಶ್ನೆಯ ಬಗ್ಗೆ ಹೇಳಿಕೊಳ್ಳಬೇಕಿದೆ.

ಪುದುಚೇರಿಯಲ್ಲಿ ಕಾರ್ಯಕರ್ತನ ಪ್ರಶ್ನೆಗೆ ಅರೆ ಕ್ಷಣ ಗಲಿಬಿಲಿಗೊಂಡಂತೆ ಕಂಡ ಪ್ರಧಾನಿ ತಮ್ಮ ಸರಕಾರ ಜನಸಾಮಾನ್ಯರ ಹಿತದೃಷ್ಟಿಯ ಮೇಲೆ ಗಮನವಿರಿಸಿದೆ ಎಂದರು. ನಿರ್ಮಲ್ ಕುಮಾರ್ ಒಬ್ಬ ವರ್ತಕರಾಗಿರುವುದರಿಂದ ಅವರು ಇಂತಹ ಪ್ರಶ್ನೆ ಕೇಳುವುದು ಸಹಜ ಎಂದೂ ಮೋದಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News