ಆಸ್ಟ್ರೇಲಿಯಾದ ಶಿಕ್ಷಣತಜ್ಞ, ಭಾರತ ಮೂಲದ ವಾಜಿಬ್ ಅಲಿ ರಾಜಸ್ಥಾನ ವಿಧಾನಸಭೆಗೆ ಆಯ್ಕೆ

Update: 2018-12-24 10:28 GMT

ಜೈಪುರ, ಡಿ.24: ಆಸ್ಟ್ರೇಲಿಯಾದಲ್ಲಿ ತನ್ನಿಬ್ಬರು ಸಹೋದರರೊಂದಿಗೆ 8 ಕಾಲೇಜುಗಳು ಮತ್ತು ಒಂದು ಶಾಲೆಯನ್ನು ನಡೆಸುತ್ತಿರುವ ಯಶಸ್ವಿ ಶಿಕ್ಷಣತಜ್ಞ, ಭಾರತ ಮೂಲದ ವಾಜಿಬ್ ಅಲಿ (36) ಅವರು ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಪರೂಪದ ಸಾಧನೆ ಮಾಡಿದ್ದಾರೆ.

ಇತರ ರಾಜಕಾರಣಿಗಳಿಗಿಂತ ವಿಭಿನ್ನ ದಾರಿಯಲ್ಲಿ ಸಾಗಿದ್ದ ಅವರು ತನ್ನ ಕ್ಷೇತ್ರದ ಗ್ರಾಮೀಣ ಹೃದಯಭಾಗದಲ್ಲಿ ಪ್ರಚಾರದಲ್ಲಿ ತೊಡಗಿಕೊಂಡಿದ್ದರು ಮತ್ತು ಚುನಾವಣೆಗೆ ಬಹಳ ಮೊದಲೇ ವಾಸ್ತವ ಸಮಸ್ಯೆಗಳ ಕುರಿತು ಮಾತನಾಡಿದ್ದರು ಹಾಗೂ ಜನರ ಹೋರಾಟಗಳನ್ನು ಬೆಂಬಲಿಸಿದ್ದರು.

ನಗರ ಬ್ಲಾಕ್‌ ನ ಸಿಕ್ರಿ ಗ್ರಾಮದಲ್ಲಿ ಮಿಯೊ ಮುಸ್ಲಿಂ ಕುಟುಂಬದಲ್ಲಿ ಜನಿಸಿದ್ದ ಅಲಿ ದಿಲ್ಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ ವ್ಯಾಸಂಗ ಪೂರ್ಣಗೊಳಿಸಿದ ಬಳಿಕ ಉನ್ನತ ಅಧ್ಯಯನಕ್ಕಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದರು ಮತ್ತು ಅಲ್ಲಿ ಕುಟುಂಬದ ಉದ್ಯಮವನ್ನು ಸೇರಿಕೊಂಡಿದ್ದರು.

ಆರು ವರ್ಷಗಳ ಹಿಂದೆ ಹೆತ್ತವರನ್ನು ನೋಡಲು ಭಾರತಕ್ಕೆ ಮರಳಿದ್ದ ಅಲಿ ತನ್ನ ಗ್ರಾಮದಲ್ಲಿಯ ದಯನೀಯ ಸ್ಥಿತಿಯನ್ನು ನೋಡಿ ಮರುಗಿದ್ದರು. ಮಿಯೊ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿರುವ ಗ್ರಾಮದಲ್ಲಿಯ ಜನರ ಬದುಕನ್ನು ಬದಲಿಸಲು ಮತ್ತು ಸಾಮಾಜಿಕ ಸ್ಥಿತಿಗಳನ್ನು ಬದಲಿಸಲು ಅವರು ಬಯಸಿದ್ದರು.

2013ರಲ್ಲಿ ಸ್ವಗ್ರಾಮಕ್ಕೆ ಮರಳಿದ್ದ ಅಲಿ ಎನ್‌ ಪಿಪಿ ಅಭ್ಯರ್ಥಿಯಾಗಿ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಇದರಿಂದ ಧೃತಿಗೆಡದೆ ಬದಲಾವಣೆಯನ್ನು ತರಲೇಬೇಕೆಂದು ದೃಢನಿರ್ಣಯ ಮಾಡಿದ್ದ ಅವರು ಪ್ರದೇಶದಲ್ಲಿ ಕ್ರಿಯಾಶೀಲರಾಗಿದ್ದರು. ತನಗೊಂದು ಗುರುತನ್ನು ಪಡೆದುಕೊಳ್ಳಲು 2015ರಲ್ಲಿ ಬಿಎಸ್‌ ಪಿಗೆ ಸೇರ್ಪಡೆಗೊಂಡಿದ್ದ ಅವರು ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಎಸ್‌ಪಿ ಅಭ್ಯರ್ಥಿ ನೇಮಸಿಂಗ್ ಅವರನ್ನು 25,467 ಮತಗಳಿಂದ ಪರಾಭವಗೊಳಿಸಿ ಆಯ್ಕೆಯಾಗಿದ್ದಾರೆ.

ಗ್ರಾಮೀಣರ ಜೀವನಮಟ್ಟವನ್ನು ಎತ್ತರಿಸಲು ತನ್ನ ಕ್ಷೇತ್ರದಲ್ಲಿ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳನ್ನು ಹೆಚ್ಚಿಸಲು ಗಮನವನ್ನು ಕೇಂದ್ರೀಕರಿಸಲು ಅವರು ನಿರ್ಧರಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸರಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರದಂತಹ ವಿಷಯಗಳತ್ತಲೂ ಗಮನ ಹರಿಸುವುದಾಗಿ ಅವರು ಹೇಳಿದ್ದಾರೆ. ಅಂತರರಾಷ್ಟ್ರೀಯ ಗ್ರಾಮೀಣ ಮಂಡಳಿಯ ಸದಸ್ಯರೂ ಆಗಿರುವ ಅಲಿ ರೈತರಿಗೆ ನೆರವಾಗಲು ಬಯಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News