ರಾಷ್ಟ್ರೀಯ ನಾಯಕರೊಂದಿಗೆ ಕಾರ್ಯಕರ್ತರ ಸಂಪರ್ಕಕ್ಕೆ ಬಿಜೆಪಿ ಹೊಸ ತಂತ್ರ

Update: 2018-12-24 13:45 GMT

ಹೊಸದಿಲ್ಲಿ, ಡಿ.24: ಪಕ್ಷದ ಕಾರ್ಯಕರ್ತರು ರಾಷ್ಟ್ರೀಯ ನಾಯಕರನ್ನು ಸಂಪರ್ಕಿಸಲು ಅನುಕೂಲವಾಗುವಂತೆ ಸರಣಿ ವಾಟ್ಸ್ಯಾಪ್ ಗುಂಪುಗಳನ್ನು ರಚಿಸಲು ಬಿಜೆಪಿ ನಿರ್ಧರಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ರಾಮ್‌ಲಾಲ್ ತಿಳಿಸಿದ್ದಾರೆ. 2019ರ ಲೋಕಸಭಾ ಚುನಾವಣೆಗೂ ಮುನ್ನ ಕಾರ್ಯಕರ್ತರು ಮತ್ತು ನಾಯಕತ್ವದ ನಡುವಿನ ಸಂವಹನಾ ಮಾರ್ಗವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ, ಬೂತ್ ಮಟ್ಟದ ‘ಪನ್ನಾ ಪ್ರಮುಖರು’ (ಪುಟ ಪ್ರಮುಖರು) ರಾಷ್ಟ್ರೀಯ ನಾಯಕತ್ವದ ಜೊತೆ ನೇರವಾಗಿ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಈ ಸರಣಿ ವಾಟ್ಸ್ಯಾಪ್ ಗುಂಪುಗಳನ್ನು ಜನವರಿಯೊಳಗೆ ರಚಿಸಲಾಗುವುದು ಎಂದವರು ತಿಳಿಸಿದ್ದಾರೆ.

ಬೂತ್ ಮಟ್ಟದ ಬಿಜೆಪಿ ಕಾರ್ಯಕರ್ತರಾಗಿರುವ ‘ಪನ್ನಾ ಪ್ರಮುಖ’ರಿಗೆ ಮತದಾರರ ಪಟ್ಟಿಯ ಒಂದು ಪುಟದಲ್ಲಿರುವ ಮತದಾರರೊಂದಿಗೆ ಸಂಪರ್ಕ ಇಟ್ಟುಕೊಳ್ಳುವ ಕರ್ತವ್ಯ ವಹಿಸಲಾಗುತ್ತದೆ. ದಿಲ್ಲಿಯಲ್ಲಿ ನಡೆದ ಬಿಜೆಪಿಯ ಬೂತ್ ಉಸ್ತುವಾರಿಗಳ ಪ್ರಥಮ ಸಮಾವೇಶದಲ್ಲಿ ಮಾತನಾಡಿದ ರಾಮ್‌ಲಾಲ್, ಬೂತ್ ಕಾರ್ಯಕರ್ತರು ವಾರಕ್ಕೆ ಕನಿಷ್ಟ 10 ಕುಟುಂಬಗಳನ್ನು ಭೇಟಿಯಾಗಿ ಬಿಜೆಪಿಗೆ ಮತ ಹಾಕುವಂತೆ ಅವರ ಮನವೊಲಿಸಬೇಕು ಎಂದು ಕರೆ ನೀಡಿದರು. ಅಲ್ಲದೆ ತಮ್ಮ ಬೂತ್ ವ್ಯಾಪ್ತಿಯ ಪ್ರಭಾವೀ ವ್ಯಕ್ತಿಗಳ ಪಟ್ಟಿ ಮಾಡಬೇಕು. ಅಲ್ಲದೆ ಆ ಪ್ರದೇಶದಲ್ಲಿ ಜನರನ್ನು ಒಟ್ಟುಗೂಡಿಸಿ ಪ್ರಧಾನಿ ಮೋದಿಯ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ಆಲಿಸುವ ವ್ಯವಸ್ಥೆ ಮಾಡುವಂತೆ ತಿಳಿಸಿದರು. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಇತರ ನಾಯಕರು ಈ ಸಂದರ್ಭ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಕೇಂದ್ರ ಸಚಿವ ವಿಜಯ್ ಗೋಯೆಲ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ‘ಆಪ್’ ಅಧ್ಯಕ್ಷ ಅರವಿಂದ್ ಕೇಜ್ರೀವಾಲ್ ವಿರುದ್ಧ ಟೀಕಾಪ್ರಹಾರ ನಡೆಸಿದರು. ವಿಶ್ವಾಸದ್ರೋಹ ಎಸಗುವುದು ಹಾಗೂ ಸುಳ್ಳು ಹೇಳುವುದು ಕಾಂಗ್ರೆಸ್‌ನ ಚಾಳಿಯಾಗಿದೆ ಎಂದ ಗೋಯೆಲ್, ದಿಲ್ಲಿಯಲ್ಲಿ ಗಂಭೀರ ಮಟ್ಟಕ್ಕೆ ತಲುಪಿರುವ ವಾಯುಮಾಲಿನ್ಯವನ್ನು ನಿಯಂತ್ರಿಸಲು ಮುಖ್ಯಮಂತ್ರಿ ಕೇಜ್ರಿವಾಲ್ ವಿಫಲರಾಗಿದ್ದಾರೆ. ಈ ಹಿಂದೆ ಕೇಜ್ರಿವಾಲ್ ಕೆಮ್ಮುತ್ತಿದ್ದರು. ಈಗ ಆಪ್‌ನ ಆಡಳಿತದಿಂದಾಗಿ ಇಡೀ ನಗರವೇ ಕೆಮ್ಮುವಂತಾಗಿದೆ ಎಂದು ಲೇವಡಿ ಮಾಡಿದರು.

ಕೇಂದ್ರ ಸಚಿವ ಹರ್ಷವರ್ಧನ್ ಮಾತನಾಡಿ, ಆಪ್ ಮತ್ತು ಕಾಂಗ್ರೆಸ್ ಪಕ್ಷಗಳು ಮೈತ್ರಿ ಮಾಡಿಕೊಂಡರೆ ದಿಲ್ಲಿಯ ಜನತೆ ಚುನಾವಣೆಯಲ್ಲಿ ಅವರಿಗೆ ಸೂಕ್ತ ಪಾಠ ಕಲಿಸಲಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News