ಇಂದು ದೇಶದ ಅತಿ ಉದ್ದದ ರಸ್ತೆ- ರೈಲು ಸೇತುವೆ 'ಬೋಗಿಬೀಲ್' ಲೋಕಾರ್ಪಣೆ

Update: 2018-12-25 03:48 GMT

ದಿಬ್ರೂಗರ್, ಡಿ.25: ಬ್ರಹ್ಮಪುತ್ರಾ ದಕ್ಷಿಣ ದಂಡೆಯಲ್ಲಿ ಅಸ್ಸಾಂನ ದಿಬ್ರೂಗರ್ ಹಾಗೂ ಉತ್ತರದಲ್ಲಿ ಧೇಮ್‌ಜಿ ಪಟ್ಟಣವನ್ನು ಸಂಪರ್ಕಿಸುವ ದೇಶದ ಅತಿ ಉದ್ದದ ರಸ್ತೆ- ರೈಲು ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ಸೇತುವೆ ಚೀನಾ ಗಡಿಯಲ್ಲಿ ರಕ್ಷಣಾ ಸಾಮಗ್ರಿಗಳ ಸಾಗಣೆಯನ್ನು ಸುಲಭಸಾಧ್ಯಗೊಳಿಸಲಿದ್ದು, ರಸ್ತೆ ಹಾಗೂ ರೈಲು ಪ್ರಯಾಣಿಕರ ಪ್ರಯಾಣ ಸಮಯ ಕೂಡಾ ಗಣನೀಯವಾಗಿ ಇಳಿಯಲು ಕಾರಣವಾಗಿದೆ.

ವೈದ್ಯಕೀಯ ಸೌಲಭ್ಯದಿಂದ ಹಿಡಿದು ಶಿಕ್ಷಣದವರೆಗೆ, ವಿಮಾನ ನಿಲ್ದಾಣಕ್ಕೆ ನೇರ ಮಾರ್ಗ ಕಲ್ಪಿಸುವ ಈ ಸೇತುವೆ ಅಸ್ಸಾಂ ಹಾಗೂ ಅರುಣಾಚಲ ಪ್ರದೇಶದ ಜನತೆಗೆ ವರದಾನವಾಗಲಿದೆ. ಅಸ್ಸಾಂನ ಉತ್ತರ ಭಾಗವನ್ನು ದಕ್ಷಿಣ ಅಸ್ಸಾಂನ ದಿಬ್ರೂಗರ್ ಜತೆ ಸಂಪರ್ಕಿಸುವ ಈ ಸೇತುವೆ ಮೊಟ್ಟಮೊದಲ ಬಾರಿಗೆ ರಾಜ್ಯದ ಉತ್ತರ- ದಕ್ಷಿಣ ಭಾಗದ ನಗರಗಳ ನಡುವೆ ನೇರ ಸಂಬಂಧ ಕಲ್ಪಿಸಲಿದೆ.

ರಸ್ತೆ ಸೇತುವೆಯ ಕೆಳಭಾಗದಲ್ಲಿರುವ ರೈಲು ಸೇತುವೆ ಸರಕು ಸಾಗಣೆ ರೈಲುಗಳ ಪ್ರಯಾಣ ಅವಧಿಯನ್ನು ಮೂರು ಗಂಟೆಗಳಷ್ಟು ಕಡಿಮೆ ಮಾಡಲಿದೆ. ಈ ಮಾರ್ಗದಲ್ಲಿ ಮೊದಲ ಪ್ರಯಾಣಿಕ ರೈಲಿಗೆ ಕೂಡಾ ಮೋದಿ ಚಾಲನೆ ನೀಡಲಿದ್ದಾರೆ.

ಮುಂದೆ ದಿಲ್ಲಿಗೆ ತೆರಳುವ ರೈಲುಗಳು ಕೂಡಾ ಈ ಮಾರ್ಗದಲ್ಲಿ ಸಂಚರಿಸಲಿದ್ದು, ದಿಲ್ಲಿ- ದಿಬ್ರೂಗರ್ ಗಡುವಿನ ಪ್ರಯಾಣ ಅವಧಿ ಸುಮಾರು ನಾಲ್ಕು ಗಂಟೆಗಳಷ್ಟು ಕಡಿಮೆಯಾಗಲಿದೆ. ಮುಂದಿನ ರಸ್ತೆ ಸೇತುವೆ 255 ಕಿಲೋಮೀಟರ್ ಹಾಗೂ ರೈಲು ಸೇತುವೆ 560 ಕಿಲೋಮೀಟರ್ ದೂರ ಇರುವುದರಿಂದ ಬೋಗಿಬೀಲ್ ಸೇತುವೆಯಿಂದಾಗಿ ಅರುಣಾಚಲ ಪ್ರದೇಶ ಹಾಗೂ ಅಸ್ಸಾಂ ನಡುವಿನ ಪ್ರಯಾಣ ಅವಧಿ ಕನಿಷ್ಠ ಮೂರು ಗಂಟೆ ಕಡಿಮೆಯಾಗಲಿದೆ. ದಿಬ್ರೂಗರ್‌ನಿಂದ ಇಟಾನಗರಕ್ಕೆ ಸುಲಭ ಸಂಪರ್ಕ ಕಲ್ಪಿಸಲು ಸಾಧ್ಯವಾಗಲಿದೆ.

1985ರ ಅಸ್ಸಾಂ ಒಪ್ಪಂದಕ್ಕೆ ಅನುಗುಣವಾಗಿ 1997-98ರಲ್ಲಿ ಈ ಸೇತುವೆಗೆ ಮಂಜೂರಾತಿ ನೀಡಲಾಗಿತ್ತು. ಅಂದಿನ ಪ್ರಧಾನಿ ಎಚ್.ಡಿ.ದೇವೇಗೌಡ 1997ರ ಜನವರಿ 22ರಂದು ಇದಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ಆದರೆ ಯೋಜನೆಗೆ ಚಾಲನೆ ದೊರಕಿದ್ದು, ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿರುವ ಅವಧಿಯಲ್ಲಿ ಅಂದರೆ 2002ರ ಎಪ್ರಿಲ್ 21ರಂದು.

4.94 ಕಿಲೋಮೀಟರ್ ಉದ್ದದ ಈ ಸೇತುವೆ ಕಾಮಗಾರಿ ಮುಕ್ತಾಯದ ಗಡುವು ಹಲವು ಬಾರಿ ಮುಂದೆ ಹೋಗಿದೆ. ಡಬ್ಬಲ್ ಡೆಕ್ಕರ್ ಸೇತುವೆಯಲ್ಲಿ ಮೂರು ರಸ್ತೆ ಲೇನ್‌ಗಳಿದ್ದು, ಕೆಳಗೆ ಎರಡು ರೈಲು ಹಳಿಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News