ರೈಲ್ವೆಗೆ ಅಚ್ಛೇ ದಿನ್ ಬಂದಿಲ್ಲ: ರೈಲಿನಲ್ಲಿ ಪ್ರಯಾಣಿಸಿ ಮೋದಿಯನ್ನು ಟೀಕಿಸಿದ ಹಿರಿಯ ಬಿಜೆಪಿ ನಾಯಕಿ

Update: 2018-12-25 17:25 GMT

ಚಂಡಿಗಡ,ಡಿ.25: ಅಮೃತಸರದ ಹಿರಿಯ ಬಿಜೆಪಿ ನಾಯಕಿ ಮತ್ತು ಪಂಜಾಬ್‌ನ ಮಾಜಿ ಆರೋಗ್ಯ ಸಚಿವೆ ಲಕ್ಷ್ಮಿ ಕಾಂತ ಚಾವ್ಲಾ ಭಾರತೀಯ ರೈಲ್ವೇಯ ಕುಸಿಯುತ್ತಿರುವ ಗುಣಮಟ್ಟದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರೈಲ್ವೇ ಸಚಿವ ಪಿಯೂಶ್ ಗೋಯಲ್ ವಿರುದ್ಧ ಕಿಡಿಕಾರಿದ್ದಾರೆ.

ರವಿವಾರದಂದು ಸರಯೂ-ಯಮುನಾ ಎಕ್ಸ್‌ಪ್ರೆಸ್‌ನಲ್ಲಿ ಅಮೃತಸರದಿಂದ ಅಯೋಧ್ಯೆಗೆ ಪ್ರಯಾಣ ಬೆಳೆಸಿದ ಚಾವ್ಲಾ, ಮೋದಿ ಮತ್ತು ಗೋಯಲ್ ಬುಲೆಟ್ ರೈಲಿನ ಬಗ್ಗೆ ಯೋಚಿಸುವುದನ್ನು ನಿಲ್ಲಿಸಿ, ಸದ್ಯ ಇರುವ ಸೇವೆಗಳನ್ನು ಸರಿಯಾಗಿ ನಡೆಸಲು ಪ್ರಯತ್ನಿಸಲಿ ಎಂದು ಹೇಳಿದ್ದಾರೆ. ಮಾಜಿ ಸಚಿವೆಯ ಅಮೃತಸರ-ಅಯೋಧ್ಯೆ ಪ್ರಯಾಣದ ವಿಡಿಯೊ ಮಾಡಲಾಗಿದ್ದು ಇದರಲ್ಲಿ ಆಕೆ ಭಾರತೀಯ ರೈಲ್ವೇ ಇಲಾಖೆಗೆ ಸಂಬಂಧಿಸಿದಂತೆ ಅಚ್ಛೇ ದಿನ್ ಇನ್ನೂ ಬಂದಿಲ್ಲ ಎಂದು ಹೇಳಿರುವುದು ದಾಖಲಾಗಿದೆ.

ಚಾವ್ಲಾ ಪ್ರಯಾಣಿಸುತ್ತಿದ್ದ ರೈಲು ಅಯೋಧ್ಯೆಗೆ ಒಂಬತ್ತು ಗಂಟೆ ತಡವಾಗಿ ತಲುಪಿದರೆ ಅದರ ಕೊನೆಯ ನಿಲ್ದಾಣ ಬಿಹಾರದ ಜಯನಗರ ತಲುಪುವ ವೇಳೆ ಒಟ್ಟಾರೆ ಹದಿನಾಲ್ಕು ಗಂಟೆ ತಡವಾಗಿತ್ತು. ಹವಾನಿಯಂತ್ರಿತ 3 ಟಯರ್ ಕೋಚ್‌ನಲ್ಲಿ ಕುಳಿತು ವಿಡಿಯೊ ಮಾಡುತ್ತಿದ್ದ ಬಿಜೆಪಿ ನಾಯಕಿ, ರೈಲು ಕೇವಲ ತಡವಾಗಿರುವುದು ಮಾತ್ರವಲ್ಲ, ಇಲ್ಲಿ ನೀರು ಮತ್ತು ಆಹಾರದ ವ್ಯವಸ್ಥೆಯೂ ಇಲ್ಲ. ಜೊತೆಗೆ ಶೌಚಾಲಯವೂ ಜೀರ್ಣಾವಸ್ಥೆಯಲ್ಲಿದೆ ಎಂದು ಕಿಡಿಕಾರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News