ಸಿಖ್ ನರಮೇಧವನ್ನು ಸಮರ್ಥಿಸಿದ್ದ ಆರೆಸ್ಸೆಸ್
1984ರಲ್ಲಿ ನಡೆದ ಸಿಖ್ಖರ ಹತ್ಯಾಕಾಂಡದ ನೆತ್ತರು ದೇಶದ ವಿವಿಧ ಭಾಗಗಳಲ್ಲಿ ಚಿಮ್ಮಿತು. ಅಂದಿನ ಆಡಳಿತ ಪಕ್ಷದ ಸದಸ್ಯರ ಕೈಗಳಿಗೆ ಅಂಟಿಕೊಂಡ ಆ ರಕ್ತದ ಕಲೆಗಳು ದೇಶದ ಜನತೆಯ ನೆನಪಿನಿಂದ ಇನ್ನೂ ಮಾಸಿಲ್ಲ. 1984ರಿಂದ ಎಲ್ಲ ರೀತಿಯ ರಾಜಕೀಯ ಪಕ್ಷಗಳು, ಎಡ ಬಲ (ಇದರಲ್ಲಿ ಬಿಜೆಪಿ ಮತ್ತು ಅಕಾಲಿದಳವೂ ಸೇರಿತ್ತು) ಮತ್ತು ನಡುವಿನ ಪಕ್ಷಗಳು ಈ ದೇಶವನ್ನು ಆಳಿವೆಯಾದರೂ ಅಪರಾಧಿಗಳಿಗಾಗಿ ನಡೆದ ಹುಡುಕಾಟ ಇನ್ನೂ ನಿಂತಿಲ್ಲ.
ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದಾರೆನ್ನಲಾಗಿರುವ ಸಜ್ಜನ್‌ಕುಮಾರ್‌ಗೆ ಶಿಕ್ಷೆಯಾಗುವ ಮೂಲಕ 1984ರ ಹತ್ಯಾಕಾಂಡ ಮತ್ತೊಮ್ಮೆ ಸುದ್ದಿಯಲ್ಲಿದೆ. ಬಿಜೆಪಿ ಇದನ್ನು ಕಾಂಗ್ರೆಸ್ ವಿರುದ್ಧ ಬಳಸುವುದಕ್ಕೆ ಹೊರಟಿದೆ. ಈ ಹಿಂದೆ ರಾಹುಲ್‌ಗಾಂಧಿಯವರು ನೀಡಿರುವ ಹೇಳಿಕೆಯೂ ವಿವಾದಕ್ಕೆ ಕಾರಣವಾಗಿತ್ತು. ರಾಜಸ್ಥಾನದ ಆಲ್ವಾರ್‌ನಲ್ಲಿ ಮಾಡಿದ ಭಾಷಣವೊಂದರಲ್ಲಿ ರಾಹುಲ್, ತನ್ನ ಅಜ್ಜಿ ಹಾಗೂ ಅಂದಿನ ಪ್ರಧಾನಿ ಇಂದಿರಾಗಾಂಧಿಯವರ ಹತ್ಯೆಯ ಕುರಿತಾದ ತನ್ನ ಸಿಟ್ಟನ್ನು ಶಮನಗೊಳಿಸಿಕೊಳ್ಳಲು ತನಗೆ 15 ವರ್ಷಗಳು ಬೇಕಾದವು ಎಂದಿದ್ದರು. ಅವರು ಸಿಖ್ಖರ ಕೋಪದ ಬಗ್ಗೆ ಭಾರೀ ವೌನ ವಹಿಸಿದರೆಂಬುದು ಬೇರೆ ಮಾತು. ಆಗ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿದ್ದ ಮೋದಿಯವರು ತಕ್ಷಣ ರಾಹುಲ್‌ಗಾಂಧಿಯವರ ಸಿಟ್ಟು ತಪ್ಪು ಮತ್ತು ಕೆಟ್ಟದು ಎಂದು ಹೇಳಿ ಸಿಖ್ಖರ ವಿರುದ್ಧವಾದ ಈ ದ್ವೇಷದಿಂದಾಗಿಯೇ ಸಾವಿರಾರು ಮಂದಿ ಸಿಖ್ಖರು ಕೊಲ್ಲಲ್ಪಟ್ಟರೆಂಬುದನ್ನು ಅವರಿಗೆ ಜ್ಞಾಪಿಸಿದ್ದರು.
ಯುಪಿಯ ಝಾನ್ಸಿಯಲ್ಲಿ ಮಾತಾಡುತ್ತ ‘‘ಅಪರಾಧಿಗಳನ್ನು ಈ ನರಮೇಧ ಕ್ಕಾಗಿ ಇನ್ನೂ ಬಂಧಿಸಿ ವಿಚಾರಣೆ ನಡೆಸಲಾಗಿಲ್ಲ ಎಂಬುದು ದುಃಖದ ಸಂಗತಿ’’ ಎಂದು ಮೋದಿ ಹೇಳಿದ್ದರು. ಹೀಗೆ ಈ ಕೆಸರೆರಚಾಟ ಮುಂದುವರಿಯುತ್ತಾ, ಬಳಿಕ ಮೋದಿಯವರು ಪ್ರಧಾನಿಯೂ ಆದರು. ಆದರೆ ಕೆಸರೆರಚಾಟ ಮಾತ್ರ ನಿಂತಿಲ್ಲ. ಇದೇ ಸಂದರ್ಭದಲ್ಲಿ 1998ರಿಂದ 2004ರ ವರೆಗೆ ದೇಶವನ್ನಾಳಿದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರಗಳು ಅಪರಾಧಿಗಳನ್ನು ಬಂಧಿಸಿ ಅವರಿಗೆ ಶಿಕ್ಷೆ ನೀಡುವ ನಿಟ್ಟಿನಲ್ಲಿ ಏನು ಮಾಡಿದ್ದರೆಂದು ಮೋದಿಯವರು ರಾಷ್ಟ್ರಕ್ಕೆ ಹೇಳಲಿಲ್ಲ. ಇಷ್ಟೇ ಅಲ್ಲದೆ, ಎಲ್.ಕೆ. ಅಡ್ವಾಣಿಯವರ ಆತ್ಮಕತೆಯ ಪ್ರಕಾರ(ಪುಟ430)ಬ್ಲೂಸ್ಟಾರ್ ಎಂದು ಕರೆಯಲ್ಪಟ್ಟ ಸೇನಾಕಾರ್ಯಾಚರಣೆ ನಡೆಸುವಂತೆ ಇಂದಿರಾಗಾಂಧಿಯವರನ್ನು ಬಲವಂತ ಪಡಿಸಿದ್ದು ತನ್ನದೇ ಪಕ್ಷ ಎಂಬ ಸತ್ಯವನ್ನು ಹೇಳಲು ಮೋದಿ ಮರೆತರು. ಕಾರ್ಯಾಚರಣೆಯಲ್ಲಿ ಬಹಳಷ್ಟು ಮಂದಿ ಯಾತ್ರಿಕರು ಕೊಲ್ಲಲ್ಪಟ್ಟಿದ್ದರು.
ಉನ್ನತ ಮಟ್ಟದ ಸಮಿತಿಗಳು, ಪೊಲೀಸ್ ವಿಚಾರಣಾ ತಂಡಗಳು ಹಾಗೂ ಆಯೋಗಗಳು ಹತ್ಯಾಕಾಂಡದ ವಿಚಾರಣೆಗಾಗಿ ನೇಮಕಗೊಂಡವಾದರೂ ಬಲೆಗೆ ಬಿದ್ದದ್ದು ಸಣ್ಣಪುಟ್ಟ ಮೀನುಗಳು ಮಾತ್ರ. ನಿಜವಾದ ಅಪರಾಧಿಗಳು ಇನ್ನೂ ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದಾರೆ. ಸತ್ಯಸಂಗತಿ ಏನೆಂದರೆ ಕಳೆದ ಮೂರು ದಶಕಗಳಲ್ಲಿ ನಾನಾ ರೀತಿಯ ಅಭಿಪ್ರಾಯ ಹೊಂದಿರುವ ಹಲವು ರಾಜಕೀಯ ಪಕ್ಷಗಳು ದೇಶದ ಆಡಳಿತ ನಡೆಸಿದ್ದವಾದರೂ ನಿಜವಾದ ಅಪರಾಧಿಗಳನ್ನು ಬಂಧಿಸಿ ಶಿಕ್ಷಿಸುವ ರಾಜಕೀಯ ಬದ್ಧತೆ, ಮನಸ್ಸು ಯಾವ ಪಕ್ಷದ ನಾಯಕರಿಗೂ ಇರಲಿಲ್ಲ. ಈ ಲೇಖಕನ ಬಳಿ ಒಂದು ಮುಖ್ಯವಾದ ದಾಖಲೆ ಇದೆ. ಅದು ಆರೆಸ್ಸೆಸ್‌ನ ಮಹಾ ಸಿದ್ಧಾಂತಿ ನಾನಾ ದೇಶ್‌ಮುಖ್‌ರು ಬರೆದಿರುವ ಮತ್ತು 1984ರ ನವೆಂಬರ್ 8ರಂದು ಪ್ರಸಾರ ಮಾಡಿರುವ ದಾಖಲೆ. ಕುತೂಹಲದ ವಿಷಯವೆಂದರೆ ಈ ದಾಖಲೆಯು (1999-2004ರ ಅವಧಿಯಲ್ಲಿ ರಕ್ಷಣಾ ಸಚಿವರಾಗಿದ್ದ ಮತ್ತು ಬಿಜೆಪಿ/ಆರೆಸ್ಸೆಸ್‌ನ ಓರ್ವ ಆತ್ಮೀಯ ಗೆಳೆಯನಾಗಿದ್ದ) ಜಾರ್ಜ್ ಫೆರ್ನಾಂಡಿಸ್‌ರವರ ಸಂಪಾದಕತ್ವದಲ್ಲಿ ಪ್ರಕಟವಾದ ಹಿಂದಿ ಸಾಪ್ತಾಹಿಕ ‘ಪ್ರತಿಪಕ್ಷ್’ದ 1984ರ ನವೆಂಬರ್ 25ರ ಸಂಚಿಕೆಯಲ್ಲಿ ಪ್ರಕಟವಾದ ದಾಖಲೆ.
‘ಇಂದಿರಾ ಕಾಂಗ್ರೆಸ್-ಆರೆಸ್ಸೆಸ್ ಗುಪ್ತ ಸಹಕಾರ’ ಎಂಬ ಶೀರ್ಷಿಕೆಯ ಈ ದಾಖಲೆ, ಇಂದಿರಾ ಕಾಂಗ್ರೆಸ್ ಮತ್ತು ಆರೆಸ್ಸೆಸ್ ನಡುವೆ ಹೆಚ್ಚುತ್ತಿದ್ದ ಹೊಸ ಸಾಮ್ಯಗಳ ಸಂಬಂಧಗಳ ಮೇಲೆ ಬೆಳಕು ಚೆಲ್ಲುತ್ತದೆ. ದಾಖಲೆಯ ಲೇಖಕ ಓರ್ವ ಆರೆಸ್ಸೆಸ್ ಸಿದ್ಧಾಂತಿ ಮತ್ತು ನೀತಿ ನಿರೂಪಕರಾಗಿರುವುದರಿಂದ ಮತ್ತು ಅದಕ್ಕೆ ಐತಿಹಾಸಿಕ ಮಹತ್ವವಿರುವುದರಿಂದ ನಾವು ನಮ್ಮ ಸಾಪ್ತಾಹಿಕದ ಧೋರಣೆಯನ್ನು ಉಲ್ಲಂಘಿಸಿ ಅದನ್ನು ಪ್ರಕಟಿಸುತ್ತಿದ್ದೇವೆ ಎಂಬ ಮುನ್ನುಡಿಯೊಂದಿಗೆ ಪ್ರಕಟವಾದ ದಾಖಲೆ ಅದು.
ಸಿಖ್ಖರ ಹತ್ಯಾಕಾಂಡಕ್ಕೆ ಅವರು (ನಾನಾದೇಶ್‌ಮುಖ್) ನೀಡುವ ಸಮರ್ಥನೆಯನ್ನು ಹೀಗೆ ಸಂಕ್ಷೇಪಿಸಬಹುದು:
* ಸಿಖ್ಖರ ನರಮೇಧವು ಯಾವುದೇ ಗುಂಪು ಅಥವಾ ಸಮಾಜ ವಿರೋಧಿ ಶಕ್ತಿಗಳು ನಡೆಸಿದ ಬದಲಾಗಿ ನಿಜವಾದ ಕ್ರೋಧದ ಪರಿಣಾಮ.
* ಸಿಖ್ಖರು ಸ್ವತಃ ಅವರಾಗಿಯೇ ಈ ದಾಳಿಗಳನ್ನು ಆಹ್ವಾನಿಸಿಕೊಂಡರು. ಹೀಗೆ ಸಿಖ್ಖರ ನರಮೇಧವನ್ನು ಸಮರ್ಥಿಸುವ ಕಾಂಗ್ರೆಸ್ ಸಿದ್ಧಾಂತವನ್ನು ದೇಶ್‌ಮುಖ್ ಮುಂದುಮಾಡಿದರು.
* ಸಾವಿರಾರು ಸಂಖ್ಯೆಯಲ್ಲಿ ಸಿಖ್ಖರ ಹತ್ಯೆನಡೆಯುತ್ತಿದ್ದಾಗ ಅವರು (ದೇಶ್‌ಮುಖ್) ದೇಶಕ್ಕೆ ಸಿಖ್ ತೀವ್ರವಾದದ ಬಗ್ಗೆ ಎಚ್ಚರಿಕೆ ನೀಡುತ್ತಿದ್ದರು. ಆ ಮೂಲಕ ಆ ಹತ್ಯೆಗಳಿಗೆ ಸೈದ್ಧಾಂತಿಕ ಸಮರ್ಥನೆ ನೀಡಿದರು.
* ಈ ದಾಖಲೆಯ ಪ್ರಕಾರ ಪಂಜಾಬ್‌ನ ಹಿಂಸೆಗೆ ಸಮಗ್ರ ಸಿಖ್ ಸಮುದಾಯ ಒಟ್ಟಾರೆಯಾಗಿ ಜವಾಬ್ದಾರಿ(ಬೇರೆಯಾರೂಅಲ್ಲ.)
* ಆತ್ಮರಕ್ಷಣೆಗಾಗಿ ಸಿಖ್ಖರು ಏನೂ ಮಾಡಬಾರದಾಗಿತ್ತು, ಬದಲಾಗಿ ಕೊಲೆಗಡುಕ ಗುಂಪುಗಳ ವಿರುದ್ಧ ತಾಳ್ಮೆ ಹಾಗೂ ಸಹನೆ ತೋರಬೇಕಾಗಿತ್ತು ಎಂದು ದೇಶ್‌ಮುಖ್ ಆ ದಾಖಲೆಯಲ್ಲಿ ವಾದಿಸಿದರು.
* ದೇಶ್‌ಮುಖ್‌ರವರ ವಾದದ ಪ್ರಕಾರ ನರಮೇಧಕ್ಕೆ ಜವಾಬ್ದಾರಿ ಸಿಖ್ ಬುದ್ಧಿ ಜೀವಿಗಳೇ ಹೊರತು ಹತ್ಯೆಕೋರ ಗುಂಪುಗಳಲ್ಲ. ಆ ಬುದ್ಧಿಜೀವಿಗಳು ಸಿಖ್ಖರನ್ನು ಒಂದು ಮಿಲಿಟಂಟ್ ಸಮುದಾಯವಾಗಿ ಮಾಡಿದ್ದರು. ಅವರನ್ನು ಅವರ ಹಿಂದೂ ಬೇರುಗಳಿಂದ ಬೇರ್ಪಡಿಸುವ ಮೂಲಕ ರಾಷ್ಟ್ರೀಯವಾಗಿ ಭಾರತೀಯರಿಂದ ದಾಳಿಗಳನ್ನು ಆಹ್ವಾನಿಸಿದ್ದರು.
ಶ್ರೀಮತಿ ಇಂದಿರಾ ಗಾಂಧಿಯವರ ಬಳಿಕ ಪ್ರಧಾನಿಯಾದ ರಾಜೀವ್ ಗಾಂಧಿಯವರು ‘‘ಒಂದು ದೊಡ್ಡ ಮರ ಬಿದ್ದಾಗ ಯಾವಾಗಲೂ ಕಂಪನಗಳಾಗುತ್ತವೆ’’ ಎಂದು ಹೇಳುವ ಮೂಲಕ ಸಿಖ್ಖರ ಹತ್ಯೆಯನ್ನು ಸಮರ್ಥಿಸಿದ್ದರು. ಈ ಮಾತನ್ನು ಶ್ರೀ ನಾನಾ ದೇಶ್‌ಮುಖ್ ಮೆಚ್ಚಿ ಹೊಗಳಿದ್ದರು. ‘‘ರಾಜೀವ್‌ಗಾಂಧಿಗೆ ಅವರ ಸಾಮರ್ಥ್ಯವನ್ನು ಸಾಬೀತುಪಡಿಸಲು ನಾವು ಅವರಿಗೆ ಸ್ವಲ್ಪ ಕಾಲಾವಕಾಶ ನೀಡಬೇಕು’’ ಎಂದು ಹೇಳಿ ಅವರ ಮಾತನ್ನು ಸಮರ್ಥಿಸಿದ್ದರು. ಆಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರ ಸಿಖ್ ಅಲ್ಪಸಂಖ್ಯಾತ ಸಮುದಾಯದವರ ವಿರುದ್ಧ ನಡೆದ ಹಿಂಸೆಯನ್ನು ನಿಯಂತ್ರಿಸಲು ಕ್ರಮ ತೆಗೆದು ಕೊಳ್ಳಬೇಕು ಎಂದು ಒತ್ತಾಯಿಸುವ ಒಂದೇ ಒಂದು ವಾಕ್ಯ ದೇಶ್‌ಮುಖ್‌ರವರ ದಾಖಲೆಯಲ್ಲಿಲ್ಲ.
1984ರಲ್ಲಿ ಈ ದಾಖಲೆಯನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡುವಾಗ ಜಾರ್ಜ್ ಫೆರ್ನಾಂಡಿಸ್ ಇಂದಿರಾ ಕಾಂಗ್ರೆಸ್ ಆರೆಸ್ಸೆಸ್ ನಡುವಿನ ಗುಪ್ತ ಸಹಕಾರವನ್ನು ಅದು ತೋರಿಸುತ್ತದೆ ಎಂದು ಬರೆದಿದ್ದರು. ಈ ಸಹಕಾರ ರಾಜಕೀಯಕ್ಕೆ ಮಾತ್ರ ಸೀಮಿತವಾಗಿತ್ತೋ ಅಥವಾ ಅದನ್ನು ಮೀರಿ ಕೊಲೆ ಹತ್ಯೆಗಳಿಗೂ ಚಾಚಿತ್ತೋ ಎಂಬುದನ್ನು 1984ರ ಸಿಖ್ಖ್ ಹತ್ಯಾಕಾಂಡದ ನಿಜವಾದ ಅಪರಾಧಿಗಳು ಯಾರು? ಎಂಬುದನ್ನು ಪತ್ತೆ ಹಚ್ಚಲು ಆಸಕ್ತರಾಗಿರುವ ಎಲ್ಲರೂ ಶೋಧ ನಡೆಸಬೇಕಾಗಿದೆ.
ಕೃಪೆ: Countercurrents.org