ಗರ್ಭಿಣಿಗೆ ಎಚ್ ಐವಿ ಸೋಂಕು ಪೀಡಿತ ರಕ್ತ ನೀಡಿದ ಸರಕಾರಿ ಆಸ್ಪತ್ರೆ ಸಿಬ್ಬಂದಿ

Update: 2018-12-26 06:57 GMT

ಚೆನ್ನೈ, ಡಿ.26: ಎಚ್‌ಐವಿ ಸೋಂಕು ಇದ್ದ ರಕ್ತವನ್ನು 24 ವರ್ಷದ ಗರ್ಭಿಣಿ ಯುವತಿಗೆ ನೀಡಿದ ಪರಿಣಾಮ ಆಕೆ ಈಗ ಎಚ್‌ಐಪಿ ಪೀಡಿತೆಯಾಗಿರುವ ವಿದ್ಯಮಾನ ಚೆನ್ನೈ ನಗರದಿಂದ 500 ಕಿ.ಮೀ. ದೂರದಲ್ಲಿರುವ ವಿರುದ್ಧು ನಗರ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ವರದಿಯಾಗಿದೆ.

ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ನೆರೆಯ ಶಿವಕಾಶಿಯಲ್ಲಿರುವ ಸರಕಾರಿ ಬ್ಲಡ್ ಬ್ಯಾಂಕಿನ ಮೂವರು ಲ್ಯಾಬ್ ಟೆಕ್ನಿಷಿಯನ್ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಎರಡು ವರ್ಷಗಳ ಹಿಂದೆ ರಕ್ತದಾನ ಮಾಡಿದ ವ್ಯಕ್ತಿ ಎಚ್‌ಐವಿ ಪಾಸಿಟಿವ್ ಆಗಿದ್ದನೆಂದು ಆತನಿಗೆ ತಿಳಿಸಲು ಯಾ ಈ ಮಾಹಿತಿ ದಾಖಲಿಸಿಕೊಳ್ಳಲು ಮೂವರೂ ವಿಫಲರಾಗಿದ್ದರೆಂದು ಆರೋಪಿಸಲಾಗಿದೆ.

ಗರ್ಭಿಣಿ ಮಹಿಳೆ ಮತ್ತಾಕೆಯ ಪತಿಗೆ ಆರ್ಥಿಕ ಸಹಾಯ ಮತ್ತು ಉದ್ಯೋಗವನ್ನು ಸರಕಾರ ಆಫರ್ ಮಾಡಿದೆಯಾದರೂ ಇಬ್ಬರೂ ಇದೀಗ ಖಾಸಗಿ ಆಸ್ಪತ್ರೆಯಿಂದ ಚಿಕಿತ್ಸೆ ಪಡೆಯಲು ಸಹಾಯ ಯಾಚಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಎನ್‌ಜಿಒ ಒಂದು ನಡೆಸಿದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದ ವ್ಯಕ್ತಿಗೆ ಎಚ್‌ಐವಿ ಮತ್ತು ಹೆಪ್ಯಾಟಿಟಿಸ್-ಬಿ ಇದೆ ಎಂದು ಪರೀಕ್ಷೆಗಳಿಂದ ತಿಳಿದು ಬಂದಿದ್ದರೂ ಲ್ಯಾಬ್ ಅಧಿಕಾರಿಗಳು ಈ ಮಾಹಿತಿಯನ್ನು ದಾಖಲೀಕರಿಸಿರಲಿಲ್ಲ ಹಾಗೂ ಪರೀಕ್ಷೆಯ ಫಲಿತಾಂಶವನ್ನು ಸಂಬಂಧಿಸಿದ ವ್ಯಕ್ತಿಗೆ ತಿಳಿಸುವ ಗೋಜಿಗೆ ಹೋಗಿರಲಿಲ್ಲ.

ಅದೇ ವ್ಯಕ್ತಿ ನೀಡಿದ ರಕ್ತವನ್ನು ಡಿಸೆಂಬರ್ 3ರಂದು ಶಿವಕಾಶಿಯ ರಕ್ತ ಬ್ಯಾಂಕಿನ ಲ್ಯಾಬ್ ಟೆಕ್ನಿಷಿಯನ್‌ಗಳು ಇತ್ತೀಚೆಗೆ ಪರೀಕ್ಷಿಸಿ ಆ ಮಹಿಳೆಗೆ ನೀಡಲೆಂದು ನೀಡಿದ್ದರು. ನಂತರ ವಿದೇಶದಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವಾಗ ಖಾಸಗಿ ಲ್ಯಾಬ್ ಒಂದರಲ್ಲಿ ಅದೇ ಯುವಕ ತನ್ನ ರಕ್ತ ತಪಾಸಣೆ ನಡೆಸಿದಾಗ ಎಚ್‌ಐವಿ ಪಾಸಿಟಿವ್ ಎಂದು ತಿಳಿಯುತ್ತಲೇ ಆತ ಸರಕಾರಿ ಆಸ್ಪತ್ರೆಗೆ ಮಾಹಿತಿ ನೀಡಿದ್ದ. ಆದರೆ ಅದಾಗಲೇ ಆ ರಕ್ತವನ್ನು ಗರ್ಭಿಣಿಗೆ ನೀಡಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News