ರಾಮಮಂದಿರ ಆಧ್ಯಾದೇಶ ಹೊರಡಿಸಿದರೆ ಸುಪ್ರೀಂಕೋರ್ಟ್‌ಗೆ ಅರ್ಜಿ: ಬಾಬರಿ ಮಸೀದಿ ಕ್ರಿಯಾ ಸಮಿತಿ

Update: 2018-12-26 16:49 GMT

ಹೊಸದಿಲ್ಲಿ, ಡಿ.26: ಅಯೋಧ್ಯೆಯ ವಿವಾದಿತ ಭೂಮಿಯಲ್ಲಿ ರಾಮಮಂದಿರ ನಿರ್ಮಿಸಲು ಅವಕಾಶ ನೀಡುವ ಆಧ್ಯಾದೇಶವನ್ನು ಹೊರಡಿಸಿದರೆ ಇದನ್ನು ವಿರೋಧಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗುವುದು ಎಂದು ಬಾಬರಿ ಮಸೀದಿ ಕ್ರಿಯಾ ಸಮಿತಿ(ಬಿಎಂಎಸಿ) ತಿಳಿಸಿದೆ.

ಮಂಗಳವಾರ ನಡೆದ ಬಿಎಂಎಸಿ ಸಭೆಯಲ್ಲಿ ಈ ಕುರಿತ ನಿರ್ಧಾರಕ್ಕೆ ಬರಲಾಗಿದೆ ಎಂದು ಸಮಿತಿಯ ಸದಸ್ಯರು ತಿಳಿಸಿದ್ದಾರೆ. ಆರೆಸ್ಸೆಸ್ ಮತ್ತು ಸಂಘಪರಿವಾರ ಆಧ್ಯಾದೇಶ ಹೊರಡಿಸುವಂತೆ ಒತ್ತಡ ಹೇರುತ್ತಿದ್ದರೆ ವಿಪಕ್ಷಗಳು ಈ ವಿವಾದಿತ ವಿಷಯದ ಕುರಿತು ನ್ಯಾಯಾಲಯದ ಆದೇಶವನ್ನು ಪಾಲಿಸಬೇಕು ಎಂದು ಹೇಳುತ್ತಿವೆ. ಜನವರಿ 4ರಂದು ಈ ಕುರಿತ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆಗೆ ಎತ್ತಿಕೊಳ್ಳಲಿದೆ. ಈ ವಿಷಯದಲ್ಲಿ ಅವಸರದ ನಿರ್ಧಾರ ಪ್ರಕಟಿಸದಂತೆ ಹಾಗೂ ಸಂಬಂಧಿತ ಎಲ್ಲಾ ದಾಖಲೆಪತ್ರಗಳನ್ನು ಕೂಲಂಕುಷವಾಗಿ ಅಧ್ಯಯನ ನಡೆಸಿ ತೀರ್ಪು ಪ್ರಕಟಿಸುವಂತೆ ಸಮಿತಿಯ ಸಭೆಯಲ್ಲಿ ಸುಪ್ರೀಂಕೋರ್ಟ್ ಅನ್ನು ಒತ್ತಾಯಿಸಲಾಯಿತು ಎಂದು ಬಿಎಂಎಸಿಯ ಸಂಚಾಲಕ ಜಿಲಾನಿ ತಿಳಿಸಿದ್ದಾರೆ.

ಅಲ್ಲದೆ ಇತ್ತೀಚೆಗೆ ನಡೆದ ಮೂರು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಗೆ ಆಗಿರುವ ಹಿನ್ನಡೆ, ರಾಮಮಂದಿರ ವಿಷಯದ ಬಗ್ಗೆ ಹಾಗೂ ಮಂದಿರ ನಿರ್ಮಾಣದ ಪರವಾಗಿ ಹಿರಿಯ ಬಿಜೆಪಿ ಮುಖಂಡರ ಭಾವೋದ್ರೇಕದ ಹೇಳಿಕೆ ಹೆಚ್ಚುತ್ತಿರುವುದನ್ನು ಲಘುವಾಗಿ ಪರಿಗಣಿಸಬಾರದು ಎಂದು ಸಭೆಯಲ್ಲಿ ಬಹುತೇಕ ಸದಸ್ಯರು ಅಭಿಪ್ರಾಯ ಸೂಚಿಸಿದರು ಎಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News