ಉನ್ನಾವೊ ಅತ್ಯಾಚಾರ ಸಂತ್ರಸ್ತೆ ವಿರುದ್ಧವೇ ಎಫ್‌ಐಆರ್ !

Update: 2018-12-27 06:07 GMT

ಲಕ್ನೋ, ಡಿ. 27: ದೇಶಾದ್ಯಂತ ಸುದ್ದಿ ಮಾಡಿದ್ದ ಉನ್ನಾವೊ ಅತ್ಯಾಚಾರ ಪ್ರಕರಣ ಇದೀಗ ಮತ್ತೊಂದು ವಿಚಿತ್ರ ತಿರುವು ಪಡೆದುಕೊಂಡಿದ್ದು, ಇದೀಗ ಸಂತ್ರಸ್ತೆ ಯುವತಿ, ಆಕೆಯ ತಾಯಿ ಹಾಗೂ ಮಾವನ ವಿರುದ್ಧ ವಂಚನೆ, ಫೋರ್ಜರಿ ಮತ್ತು ದಾಖಲೆಗಳನ್ನು ತಿರುಚಿದ ಆರೋಪ ಹೊರಿಸಿ ಎಫ್‌ಐಆರ್ ದಾಖಲಿಸಲಾಗಿದೆ.

ಅಮಾಯಕರನ್ನು ಪ್ರಕರಣದಲ್ಲಿ ಸಿಲುಕಿಸುವ ಸಲುವಾಗಿ ಈ ಕೃತ್ಯ ಎಸಗಲಾಗಿದೆ ಎಂಬ ಗಂಭೀರ ಆರೋಪ ಮಾಡಲಾಗಿದೆ.

ಉನ್ನಾವೋದ ಮಖಿ ಪೊಲೀಸ್ ಠಾಣೆಯಲ್ಲಿ ಡಿಸೆಂಬರ್ 23ರಂದು ಪ್ರಕರಣ ದಾಖಲಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳಾಗಿರುವ ಶುಭಂ ಸಿಂಗ್‌ನ ತಂದೆ ಹರಿಪಾಲ್ ಸಿಂಗ್ ಎಂಬಾತ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸ್ಥಳೀಯ ನ್ಯಾಯಾಲಯ ನೀಡಿದ ಸೂಚನೆ ಅನ್ವಯ ಈ ಎಫ್‌ಐಆರ್ ದಾಖಲಿಸಲಾಗಿದೆ.

ಬಿಜೆಪಿ ಶಾಸಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗುವ ಮೂಲಕ ಈ ಪ್ರಕರಣ ಇಡೀ ದೇಶದಲ್ಲಿ ಸುದ್ದಿ ಮಾಡಿತ್ತು. ಶುಭಂ ಸಿಂಗ್, ಆತನ ತಾಯಿ ಶಶಿ ಸಿಂಗ್, ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಹಾಗೂ ಇತರ ಎಂಟು ಮಂದಿಯನ್ನು ಸಿಬಿಐ ಬಂಧಿಸಿದ್ದು, ಕಳೆದ ಏಪ್ರಿಲ್‌ನಿಂದ ಇವರು ಜೈಲಿನಲ್ಲಿದ್ದಾರೆ.

ಹರಿಪಾಲ್ ಸಿಂಗ್ ಅರ್ಜಿಯಲ್ಲಿ ಉಲ್ಲೇಖಿಸಿರುವ ಪ್ರಮುಖ ಅಂಶಗಳ ಆಧಾರದಲ್ಲಿ ಎಫ್‌ಐಆರ್ ದಾಖಲಿಸುವಂತೆ ಉನ್ನಾವೊ ಪೊಲೀಸರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.

ಸೆಂಗರ್‌ನಿಂದ ಅತ್ಯಾಚಾರಕ್ಕೆ ಒಳಗಾಗಿದ್ದಾಳೆ ಎನ್ನಲಾದ ಯುವತಿ ಅವಧೇಶ್ ತಿವಾರಿ ಎಂಬಾತನ ಜತೆ ಪ್ರೇಮಸಂಬಂಧ ಹೊಂದಿದ್ದು, ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಓಡಿಹೋಗಿದ್ದಳು ಎಂದು ಸಿಂಗ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಯುವತಿ ಮರಳಿದ ಬಳಿಕ ಆಕೆಯನ್ನು ಶುಭಂ ಸಿಂಗ್‌ಗೆ ವಿವಾಹ ಮಾಡಿಕೊಳ್ಳುವಂತೆ ಶಶಿ ಸಿಂಗ್‌ಗೆ ಯುವತಿಯ ಕುಟುಂಬ ಸದಸ್ಯರು ದುಂಬಾಲು ಬಿದ್ದಿದ್ದರು. ಇದಕ್ಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ಅನಗತ್ಯವಾಗಿ ನಮ್ಮ ಕುಟುಂಬದವರ ವಿರುದ್ಧ ಆರೋಪ ಮಾಡಿದ್ದಾರೆ ಎನ್ನುವುದು ಅರ್ಜಿದಾರರ ವಾದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News