ತಂದೆ ನೀಡಿದ ಕ್ರೀಡಾಂಗಣ ನೆರವಿನಿಂದ ಮಗಳು ರಾಷ್ಟ್ರೀಯ ತಂಡದಲ್ಲಿ ಅವಕಾಶ ಪಡೆದರು ….!

Update: 2018-12-30 07:40 GMT

ಜೈಪುರ, ಡಿ.30: ಶೂಟರ್ ಅಭಿನವ್ ಬಿಂದ್ರಾ ಶೂಟಿಂಗ್ ಅಭ್ಯಾಸಕ್ಕಾಗಿ ಅವರ ತಂದೆ ಶೂಟಿಂಗ್ ರೇಂಜ್ ನಿರ್ಮಿಸಿಕೊಟ್ಟಿದ್ದರು. ಅವರು ಇದರ ನೆರವಿನಲ್ಲಿ ಒಲಿಂಪಿಕ್ಸ್ ಚಿನ್ನ ಜಯಿಸಿದ್ದರು.  ಅಂತದ್ದೇ ಇನ್ನೊಂದು ಕಥೆ. ಇಲ್ಲಿ ತಂದೆಯೊಬ್ಬರು ಮಗಳಿಗೆ ಕ್ರಿಕೆಟ್ ಅಭ್ಯಾಸಕ್ಕಾಗಿ ಕ್ರೀಡಾಂಗಣ ನಿರ್ಮಿಸಿಕೊಟ್ಟಿದ್ದಾರೆ.

ಜೈಪುರದ   ಸುರೇಂದ್ರ ಪೂನಿಯಾ. ಅವರೇನು ಉದ್ಯಮಿಯಲ್ಲ.  ಅವರೊಬ್ಬ ಸರಕಾರಿ ಗುಮಾಸ್ತ. ಅವರು ತನ್ನ ಮಗಳು ಪ್ರಿಯಾ ಪೂನಿಯಾರಿಗೆ ಅಭ್ಯಾಸಕ್ಕಾಗಿ ಕ್ರೀಡಾಂಗಣವನ್ನು ನಿರ್ಮಿಸಿಕೊಟ್ಟಿದ್ದಾರೆ. ಪ್ರಿಯಾ ಪೂನಿಯಾ ತಂದೆ ನೀಡಿದ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿ ಇದೀಗ ರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

22ರ ಹರೆಯದ  ಆರಂಭಿಕ ಬ್ಯಾಟ್ಸ್ ವುಮೆನ್ ಪ್ರಿಯಾ ಪೂನಿಯಾ  ಅವರು ನ್ಯೂಝಿಲೆಂಡ್ ವಿರುದ್ಧದ ಟ್ವೆಂಟಿ-20 ಪಂದ್ಯಗಳ ಪ್ರವಾಸ ಸರಣಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಮಗಳು ಪ್ರಿಯಾಗೆ ಕ್ರಿಕೆಟ್ ನಲ್ಲಿ ತೀವ್ರವಾದ ಆಸಕ್ತಿ ಇರುವುದನ್ನು ಗಮನಿಸಿದ ಸುರೇಂದ್ರ ಪೂನಿಯಾ  2010ರಲ್ಲಿ ಜೈಪುರ ಹೊರವಲಯದ ಹರ್ಮಾಡ  ಎಂಬಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸುವ ಉದ್ದೇಶಕ್ಕಾಗಿ ಜಮೀನು ಖರೀದಿಸಿದ್ದರು. ಇದಕ್ಕಾಗಿ 22 ಲಕ್ಷ ರೂ. ಸಾಲ ಪಡೆದಿದ್ದರು.  ಅಲ್ಲದೆ ಈ ಉದ್ದೇಶಕ್ಕಾಗಿ  ತನ್ನಲ್ಲಿರುವ ಜಮೀನನ್ನು ಮಾರಾಟ ಮಾಡಿದ್ದರು.

2016ರಲ್ಲಿ ದಿಲ್ಲಿಯಲ್ಲಿ ಕೆಲಸದಲ್ಲಿದ್ದ ಸುರೇಂದ್ರ ಪೂನಿಯಾ ಅವರು ಮಗಳನ್ನು ಉತ್ತಮ ಕ್ರಿಕೆಟ್ ಆಟಗಾರ್ತಿಯಾಗಿ ರೂಪಿಸುವ ಉದ್ದೇಶಕ್ಕಾಗಿ ಜೈಪುರಕ್ಕೆ ವರ್ಗಾವಣೆ ಮಾಡಿಕೊಂಡರು. ಜೈಪುರದಲ್ಲಿ ಮಗಳು ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವುದನ್ನು ಗಮನಿಸಿ ಆಕೆಗೆ ಇನ್ನಷ್ಟು ಸೌಲಭ್ಯ ೊದಗಿಸಲು ಮುಂದಾದರು. ಗ್ರೌಂಡ್ಸ್ ಮ್ಯಾನ್ ಒಬ್ಬರನ್ನು ಸಮೀಪಿಸಿದಾಗ ಪಿಚ್ ನಿರ್ವಹಣೆಗೆ 1 ಲಕ್ಷ ರೂ. ಬೇಡಿಕೆ ಮುಂದಿಟ್ಟರು. ಆದರೆ ಸುರೇಂದ್ರ ಪೂನಿಯಾಗೆ ಇದು ಸಾಧ್ಯವಿರಲಿಲ್ಲ. ಅವರೇ ಸ್ವತ: ಪಿಚ್ ನಿರ್ಮಿಸಿ ಮಗಳಿಗೆ  ಅಭ್ಯಾಸ ನಡೆಸಲು ಅವಕಾಶ ಮಾಡಿಕೊಟ್ಟರು. ಪ್ರತಿ ತಿಂಗಳು 15 ಸಾವಿರ ರೂ.ಗಳನ್ನು ಪಿಚ್ ನಿರ್ವಹಣೆಗೆ ಅವರು ಖರ್ಚು  ಮಾಡುತ್ತಿದ್ದಾರೆ. ಪ್ರಿಯಾಗೆ ಅವರ ತಂದೆ ಸುರೇಂದ್ರ ಪೂನಿಯಾ ಮೆಂಟರ್ , ಕೋಚ್ ಎಲ್ಲವೂ ಆಗಿದ್ದಾರೆ.

2015ರಲ್ಲಿ ಪ್ರಿಯಾ ದೇಶಿಯ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಪಶ್ಚಿಮ ವಲಯ ವಿರುದ್ಧದ ಪಂದ್ಯದಲ್ಲಿ ಉತ್ತರ ವಲಯ ತಂಡದ ಪರ  ಆಡಿದ ಪ್ರಿಯಾ 95 ರನ್, ನ್ಯೂಝಿಲೆಂಡ್ ವಿರುದ್ಧ ಭಾರತ ಎ’ ತಂಡದಲ್ಲಿ 59 ಎಸೆತಗಳಲ್ಲಿ 42 ರನ್ ಗಳಿಸಿ ಗಮನ ಸೆಳೆದಿದ್ದರು.

 ಕಳೆದ ಎರಡು ಆವೃತ್ತಿಗಳಲ್ಲಿ ದಿಲ್ಲಿ ತಂಡದ ಪರ ಉತ್ತಮ ಪ್ರದರ್ಶನ ನೀಡಿದ್ದ ಪ್ರಿಯಾ ಇದೀಗ ಆಯ್ಕೆ ಸಮಿತಿಯ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News