1961ರಿಂದ 13 ಕೋಮುದಂಗೆಗಳ ವಿಚಾರಣಾ ವರದಿಗಳು ‘ಅಲಭ್ಯ’

Update: 2018-12-30 16:33 GMT

ಹೊಸದಿಲ್ಲಿ, ಡಿ.30: 1961ರಿಂದ ದೇಶದಲ್ಲಿಯ ಕೋಮುದಂಗೆಗಳ ಕುರಿತು ಗೃಹಸಚಿವಾಲಯದ ವೆಬ್‌ಸೈಟಿನಲ್ಲಿ ಲಭ್ಯವಿಲ್ಲದ 13 ವಿಚಾರಣಾ ಆಯೋಗಗಳ ವರದಿಗಳ ಸ್ಥಿತಿಗತಿಯನ್ನು ಪತ್ತೆ ಹಚ್ಚಲು ಹಿರಿಯ ಅಧಿಕಾರಿಯನ್ನು ನಿಯೋಜಿಸುವಂತೆ ಮತ್ತು 15 ದಿನಗಳಲ್ಲಿ ತನಗೆ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ಕೇಂದ್ರ ಮಾಹಿತಿ ಆಯೋಗ (ಸಿಐಸಿ)ವು ಗೃಹ ಕಾರ್ಯದರ್ಶಿ ರಾಜೀವ ಗಾಬಾ ಅವರಿಗೆ ನಿರ್ದೇಶ ನೀಡಿದೆ. ಗೃಹ ಸಚಿವಾಲಯದ ಬಳಿ ಈ ವರದಿಗಳು ಇಲ್ಲವೆಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದರು.

ಆರ್‌ಟಿಐ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಅವರ ಅರ್ಜಿಯ ವಿಚಾರಣೆ ಸಂದರ್ಭ ಮಾಹಿತಿ ಆಯುಕ್ತ ಬಿಮಲ್ ಜುಲ್ಕಾ ಅವರು ಈ ನಿರ್ದೇಶವನ್ನು ಹೊರಡಿಸಿದ್ದಾರೆ. ಕೋಮುದಂಗೆಗಳ ಕುರಿತು ವಿವಿಧ ವಿಚಾರಣಾ ಆಯೋಗಗಳು ಅಥವಾ ನ್ಯಾಯಾಂಗ ಆಯೋಗಗಳ ಸಂಪೂರ್ಣ ವರದಿಗಳ ಕುರಿತು ಸಚಿವಾಲಯದಿಂದ ಮಾಹಿತಿಯನ್ನು ಭಾರದ್ವಾಜ್ ಕೋರಿದ್ದರು.

ಕೋಮುದಂಗೆಗಳ ಕುರಿತು ನ್ಯಾಯಾಂಗ ಮತ್ತು ವಿಚಾರಣಾ ಆಯೋಗಗಳ ವರದಿಗಳ ಅಧ್ಯಯನಕ್ಕಾಗಿ ಗೃಹ ಸಚಿವಾಲಯವು 2006ರಲ್ಲಿ ರಾಷ್ಟ್ರೀಯ ಏಕತಾ ಮಂಡಳಿಯ ಕಾರ್ಯತಂಡವೊಂದನ್ನು ರಚಿಸಿತ್ತು ಮತ್ತು ಅದು ಇಂತಹ 29 ವರದಿಗಳನ್ನು ಅಧ್ಯಯನ ಮಾಡಿತ್ತು. ಈ ಪೈಕಿ 1961ರಿಂದ 2003ರವರೆಗಿನ ಅವಧಿಯಲ್ಲಿನ ಕೋಮುದಂಗೆಗಳಿಗೆ ಸಂಬಂಧಿಸಿದ 13 ವಿಚಾರಣಾ ವರದಿಗಳು ಗೃಹ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಲಭ್ಯವಿಲ್ಲ ಎಂದು ತನ್ನ ಅರ್ಜಿಯಲ್ಲಿ ತಿಳಿಸಿದ್ದ ಭಾರದ್ವಾಜ್,ಅವುಗಳ ಪ್ರತಿಗಳಿಗಾಗಿ ಕೋರಿಕೆ ಸಲ್ಲಿಸಿದ್ದರು.

ಗೃಹ ಸಚಿವಾಲಯವು ವರದಿಗಳ ಅಧ್ಯಯನಕ್ಕಾಗಿ ಕಾರ್ಯತಂಡವೊಂದನ್ನು ರಚಿಸಿದ್ದನ್ನು ಬೆಟ್ಟು ಮಾಡಿರುವ ಜುಲ್ಕಾ,ಇಂತಹ ವರದಿಗಳನ್ನು ತನಗೆ ಸಲ್ಲಿಸಲಾಗಿಲ್ಲ ಎಂದು ವಿಚಾರಣೆ ವೇಳೆ ಗೃಹಸಚಿವಾಲಯ(ಪ್ರತಿವಾದಿ)ವು ತಿಳಿಸಿದೆ. ಪ್ರತಿವಾದಿಯು ಅರ್ಜಿದಾರರು ಕೋರಿದ ಮಾಹಿತಿಗಳನ್ನೂ ಒದಗಿಸಿಲ್ಲ,ಆರ್‌ಟಿಐ ಅರ್ಜಿಯ ವರ್ಗಾವಣೆಯನ್ನೂ ಮಾಡಿಲ್ಲ. ವಾಸ್ತವದಲ್ಲಿ ಇಂತಹ ಸಂಪೂರ್ಣ ನಿಷ್ಕ್ರಿಯತೆಗೆ ಯಾವುದೇ ಸಮರ್ಥನೆಯನ್ನೂ ಅರ್ಜಿದಾರರಿಗೆ ಒದಗಿಸಿಲ್ಲ ಎಂದು ಹೇಳಿರುವ ಅವರು,ಭಾರದ್ವಾಜ್ ಎತ್ತಿರುವ ವಿಷಯವು ಹೆಚ್ಚಿನ ಸಾರ್ವಜನಿಕ ಹಿತಾಸಕ್ತಿಯನ್ನು ಒಳಗೊಂಡಿದೆ,ಹೀಗಾಗಿ ಸಾರ್ವಜನಿಕ ಮಾಹಿತಿ ಅಧಿಕಾರಿ(ಪಿಐಒ)ಯ ನಡವಳಿಕೆಯನ್ನು ಖಂಡಿತವಾಗಿಯೂ ಒಪ್ಪಲು ಸಾಧ್ಯವಿಲ್ಲ ಎಂದು ಝಾಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News