ಮಾಲ್ ನಲ್ಲಿ ಬಾಂಬ್ ಸ್ಫೋಟ: ಇಬ್ಬರು ಮೃತ್ಯು
Update: 2018-12-31 16:43 GMT
ಮನಿಲಾ,ಡಿ.31: ದಕ್ಷಿಣ ಫಿಲಿಪ್ಪೀನ್ಸ್‌ನಲ್ಲಿ ಕೊಟಾಬಾಟೊ ನಗರದ ಮಾಲೊಂದರಲ್ಲಿ ಕಚ್ಚಾ ಬಾಂಬ್ ಸ್ಫೋಟಿಸಿ ಕನಿಷ್ಠ ಇಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
ಇದೊಂದು ಐಸಿಸ್ ಬೆಂಬಲಿತ ಸ್ಥಳೀಯ ಸಂಘಟನೆಯೊಂದರ ಕೃತ್ಯವೆಂದು ಪೊಲೀಸರು ಶಂಕಿಸಿದ್ದಾರೆ. ಇದೇ ವೇಳೆ ಆ ಪ್ರದೇಶದಲ್ಲಿ ಸ್ಫೋಟಗೊಳ್ಳದ ಕಚ್ಚಾ ಬಾಂಬೊಂದು ಪತ್ತೆಯಾಗಿದ್ದು, ಅದನ್ನು ನಿಷ್ಕ್ರಿಯಗೊಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಐಸಿಸ್‌ಗೆ ನಿಷ್ಠೆ ಹೊಂದಿದ್ದರೆನ್ನಲಾದ ಸಣ್ಣ ಭಯೋತ್ಪಾದಕ ಗುಂಪಿನ ಏಳು ಮಂದಿ ಸದಸ್ಯರನ್ನು ಸರಕಾರಿ ಪಡೆಗಳು ಇತ್ತೀಚೆಗೆ ಹತ್ಯೆಗೈದಿರುವುದಕ್ಕಾಗಿ ಪ್ರತೀಕಾರವಾಗಿ ಈ ಸ್ಫೋಟ ನಡೆದಿರಬೇಕೆಂದು ಮೇಜರ್ ಜನರಲ್ ಸಿರಿಲಿಟೊ ಸೊಬೆಜನಾ ತಿಳಿಸಿದ್ದಾರೆ.