ಲಿಂಗ ಸಮಾನತೆಯ ಹೋರಾಟವನ್ನು ನಾವು ಪ್ರತಿನಿಧಿಸುತ್ತಿದ್ದೇವೆ: ಶಬರಿಮಲೆ ದೇಗುಲ ಪ್ರವೇಶಿಸಿದ ಬಿಂದು, ಕನಕದುರ್ಗಾ

Update: 2019-01-02 10:22 GMT

ತಿರುವನಂತಪುರಂ, ಜ.2: “ನಾವಿಬ್ಬರೂ ಲಕ್ಷಗಟ್ಟಲೆ ಮಹಿಳಾ ಭಕ್ತರನ್ನು ಹಾಗೂ ಲಿಂಗ ಸಮಾನತೆಗಾಗಿ ಹೋರಾಡುತ್ತಿರುವ ಸಮಾಜವನ್ನು ಪ್ರತಿನಿಧಿಸುತ್ತಿದ್ದೇವೆ'' ಎಂದು ಇಂದು ಮುಂಜಾನೆ ಶಬರಿಮಲೆ ದೇವಸ್ಥಾನ ಪ್ರವೇಶಿಸಿ ಇತಿಹಾಸ ರಚಿಸಿದ 50 ವರ್ಷದ ಒಳಗಿನ ಇಬ್ಬರು ಮಹಿಳೆಯರ ಪೈಕಿ ಒಬ್ಬರಾದ ಬಿಂದು ಹೇಳಿದ್ದಾರೆ.

ಅಯ್ಯಪ್ಪ ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರೂ ಪ್ರವೇಶಿಸಬಹುದೆಂದು ಸುಪ್ರೀಂ ಕೋರ್ಟ್ ಕಳೆದ ವರ್ಷ ನೀಡಿದ ತೀರ್ಪಿನ ನಂತರ ಇದೇ ಮೊದಲ ಬಾರಿಗೆ  44 ವರ್ಷದ ಬಿಂದು ಅಮಿನಿ ಹಾಗೂ 42 ವರ್ಷದ ಕನಕದುರ್ಗಾ ಪ್ರವೇಶಿಸಿ  ಇಡೀ ದೇಶದ ಗಮನ ಸೆಳೆದಿದ್ದಾರೆ.

“ರಾಜಕೀಯ ಅಜೆಂಡಾ ಹೊಂದಿದ ಜನರ ಹೊರತಾಗಿ ನಮ್ಮ ವಿರುದ್ಧ ಇತರರು ಪ್ರತಿಭಟಿಸುತ್ತಿಲ್ಲ'' ಎಂದು ಬಿಂದು ಹೇಳಿದರು. ``ನಾಮಜಪ ಮಾಡುವವರು ಹಾಗೂ ಬಿಜೆಪಿ ಜನರು ಮಾತ್ರ ತಮ್ಮ ವಿರುದ್ಧ ಸಣ್ಣ ಮಟ್ಟಿನ ಪ್ರತಿಭಟನೆ ನಡೆಸುತ್ತಿದ್ದಾರೆ,'' ಎಂದೂ ಅವರು ಹೇಳಿಕೊಂಡರು.

ಬಿಂದು ಜತೆ ದೇವಳ ಪ್ರವೇಶಿಸಿದ ಕನಕದುರ್ಗಾ ಮಾತನಾಡುತ್ತಾ ತನಗೆ ಮತ್ತು ಬಿಂದುವಿಗೆ ವಾಪಸ್ ಮನೆಗೆ ಹೋಗಲು ಭಯವಿಲ್ಲ ಎಂದಿದ್ದಾರೆ.

“ನಾವು ಖಂಡಿತವಾಗಿಯೂ ಭಯ ಹೊಂದಿಲ್ಲ. ಮಹಿಳೆಯರಾಗಿ ನಮಗಿರುವ ಹಕ್ಕನ್ನು ನಾವು ಚಲಾಯಿಸಿದ್ದೇವೆ. ನಾವು ಯಾರಿಗೂ ನೋವುಂಟು ಮಾಡಿಲ್ಲವೆಂಬುದರ ಬಗ್ಗೆ ನಮಗೆ ಶೇ.100ರಷ್ಟು ಖಾತರಿಯಿದೆ'' ಎಂದು ಅವರು ತಿಳಿಸಿದರು.

“ನಾವಿಬ್ಬರೂ ಪಂಬಾ ಮೂಲ ಶಿಬಿರದಿಂದ 1:30ಕ್ಕೆ ಹೊರಟು ಸನ್ನಿಧಾನಂ ಅನ್ನು ಸುಮಾರು 3:30ಕ್ಕೆ ತಲುಪಿ ಪ್ರಾರ್ಥನೆ ಸಲ್ಲಿಸಿ ವಾಪಸಾದೆವು. ಯಾರೂ ಯಾವುದೇ ತೊಂದರೆ ಸೃಷಿಸಿಲ್ಲ'' ಎಂದು ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡುತ್ತಾ ಕನಕದುರ್ಗಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News