‘ಪೂರ್ವಯೋಜಿತ’ ಸಂದರ್ಶನದಲ್ಲೂ ರಫೇಲ್ ಬಗ್ಗೆ ಮಾತನಾಡದ ಪ್ರಧಾನಿ: ರಾಹುಲ್ ವ್ಯಂಗ್ಯ

Update: 2019-01-02 14:54 GMT

ಹೊಸದಿಲ್ಲಿ,ಜ.2: ರಫೇಲ್ ವಿವಾದ ಬುಧವಾರ ಲೋಕಸಭೆಯಲ್ಲಿ ಮತ್ತೊಮ್ಮೆ ಕೋಲಾಹಲ ಸೃಷ್ಟಿಸಿದ್ದು, ಧ್ವನಿಮುದ್ರಿಕೆಯೊಂದನ್ನು ಸದನದಲ್ಲಿ ಕೇಳಿಸಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಮುಂದಾದಾಗ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಅದಕ್ಕೆ ಅನುಮತಿ ನೀಡಲಿಲ್ಲ. ಈ ಧ್ವನಿಮುದ್ರಿಕೆಯಲ್ಲಿ ಮಾಜಿ ರಕ್ಷಣಾ ಸಚಿವ ಮನೋಹರ ಪಾರಿಕ್ಕಾರ್ ಅವರು,ಸರಕಾರಕ್ಕೆ ತೊಂದರೆಯನ್ನುಂಟು ಮಾಡಬಲ್ಲ ರಫೇಲ್ ಒಪ್ಪಂದ ಕುರಿತ ಕಡತಗಳು ತನ್ನ ಬಳಿಯಿವೆ ಎಂದು ಹೇಳಿದ್ದಾರೆನ್ನಲಾಗಿದೆ. ಆದರೆ ಈ ಧ್ವನಿಮುದ್ರಿಕೆಯ ಸತ್ಯಾಸತ್ಯತೆಯು ಖಚಿತಪಟ್ಟಿಲ್ಲ.

ರಫೇಲ್ ಒಪ್ಪಂದವನ್ನು ‘ಕಾಲಿ ದಾಲ್’ ಎಂದು ಬಣ್ಣಿಸಿದ ರಾಹುಲ್,ಮಂಗಳವಾರ ಸುದ್ದಿಸಂಸ್ಥೆಯೊಂದರ 90 ನಿಮಿಷಗಳ ಅವಧಿಯ ‘ಪೂರ್ವಯೋಜಿತ’ ಸಂದರ್ಶನದಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಫೇಲ್ ವಿವಾದದ ಕುರಿತು ಮಾತನಾಡಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದರು.

 ರಾಹುಲ್‌ ರನ್ನು ಕಟುವಾಗಿ ಟೀಕಿಸಿರುವ ಹಿರಿಯ ಬಿಜೆಪಿ ನಾಯಕ ಹಾಗೂ ರಾಜ್ಯಸಭಾ ನಾಯಕ ಅರುಣ್ ಜೇಟ್ಲಿ ಅವರು,ಕಾಂಗ್ರೆಸ್ ಅಧ್ಯಕ್ಷರು ಪದೇ ಪದೇ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಧ್ವನಿಮುದ್ರಿಕೆಯನ್ನು ಕೇಳಿಸುವ ಮುನ್ನ ಅದರ ಸತ್ಯಾಸತ್ಯತೆಯನ್ನು ದೃಢಪಡಿಸುವಂತೆ ರಾಹುಲ್‌ ಗೆ ಸವಾಲು ಒಡ್ಡಿದ ಅವರು, ಧ್ವನಿಮುದ್ರಿಕೆಯು ಕಪೋಲಕಲ್ಪಿತವಾಗಿದ್ದರೆ ಸದನದಿಂದ ಉಚ್ಚಾಟಿಸಲ್ಪಡುವ ಅಪಾಯದ ಬಗ್ಗೆ ಎಚ್ಚರಿಕೆ ಗಂಟೆಯನ್ನು ಮೊಳಗಿಸಿದ್ದಾರೆ.

ಲೋಕಸಭೆಯಲ್ಲಿ ತನ್ನ 20 ನಿಮಿಷಗಳ ಭಾಷಣದಲ್ಲಿ ರಾಹುಲ್ ಮೋದಿಯವರಿಗೆ ಕೆಲವು ನೇರ ಪ್ರಶ್ನೆಗಳನ್ನೆಸೆದರು. 126ರ ಬದಲಿಗೆ 36 ಯುದ್ಧವಿಮಾನಗಳನ್ನು ಖರೀದಿಸಲು ಒಪ್ಪಂದವನ್ನು ಎಂದು ಬದಲಿಸಲಾಗಿತ್ತು, ಪ್ರಧಾನಿಯವರು ಇದನ್ನು ಏಕಪಕ್ಷೀಯವಾಗಿ ಮಾಡಿದ್ದರೇ ಅಥವಾ ಇದಕ್ಕೆ ಮುನ್ನ ವಾಯುಪಡೆಯ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಿದ್ದರೇ, ಯುದ್ಧವಿಮಾನದ ದರವನ್ನು 526 ಕೋ.ರೂ.ಗಳಿಂದ 1,600 ಕೋ.ರೂ.ಗೆ ಹೆಚ್ಚಿಸಿದ್ದೇಕೆ, ದರ ಏರಿಕೆಗೆ ರಕ್ಷಣಾ ಸಚಿವಾಲಯದ ಅಧಿಕಾರಿಗಳು ಆಕ್ಷೇಪಣೆಯನ್ನು ವ್ಯಕ್ತಪಡಿಸಿರಲಿಲ್ಲವೇ ಮತ್ತು ಗುತ್ತಿಗೆಯನ್ನು ಎಚ್‌ಎಎಲ್‌ನಂತಹ ಅನುಭವಿ ಸಂಸ್ಥೆಯಿಂದ ಕಿತ್ತುಕೊಂಡು ಅನಿಲ್ ಅಂಬಾನಿ ಕಂಪನಿಗೆ ನೀಡಿ ನಷ್ಟಕ್ಕೆ ಕಾರಣವಾಗಿದ್ದೇಕೆ ಎಂಬ ಸರಣಿ ಪ್ರಶ್ನೆಗಳನ್ನು ರಾಹುಲ್ ಕೇಳಿದರು.

ಸದನದಲ್ಲಿ ತನ್ನ ಪ್ರಶ್ನೆಗಳಿಗೆ ಉತ್ತರಿಸುವಂತೆ ಪ್ರಧಾನಿಯವರಿಗೆ ಸವಾಲು ಒಡ್ಡಿದ ಅವರು,ಮೋದಿಯವರಿಗೆ ಸದನಕ್ಕೆ ಬರಲು ಮತ್ತು ರಫೇಲ್ ಒಪ್ಪಂದ ಕುರಿತು ಪ್ರಶ್ನೆಗಳನ್ನೆದುರಿಸುವ ಎದೆಗಾರಿಕೆಯಿಲ್ಲ ಎಂದು ಕುಟುಕಿದರು.

ವ್ಯತ್ಯಯಗಳು ಮತ್ತು ಮುಂದೂಡಿಕೆಗಳಿಂದ ಜರ್ಜರಿತವಾಗಿದ್ದ ಕಲಾಪಗಳ ನಡುವೆ ರಾಹುಲ್,ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಮತ್ತು ಅಪರಿಚಿತ ವ್ಯಕ್ತಿಯೋರ್ವನ ನಡುವೆ ನಡೆದಿತ್ತೆನ್ನಲಾದ, ದೃಢಪಡದ ಧ್ವನಿಮುದ್ರಿಕೆಯನ್ನು ಸದನಕ್ಕೆ ಕೇಳಿಸಲು ಪ್ರಯತ್ನಿಸಿದರು. ಮುಖ್ಯಮಂತ್ರಿ ಪಾರಿಕ್ಕಾರ್ ಬಳಿ ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ಎಲ್ಲ ಕಡತಗಳಿವೆ ಮತ್ತು ಕೇಂದ್ರವನ್ನು ಬ್ಲಾಕ್‌ ಮೇಲ್ ಮಾಡಲು ಅವರು ಅವುಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ರಾಣೆಯವರು ಈ ಆಡಿಯೋದಲ್ಲಿ ಹೇಳಿದ್ದಾರೆನ್ನಲಾಗಿದೆ.

 ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತು ಇತರ ಬಿಜೆಪಿ ಸಂಸದರ ಆಕ್ಷೇಪಣೆಗಳ ಬಳಿಕ ಸ್ಪೀಕರ್ ಧ್ವನಿಮುದ್ರಿಕೆಯನ್ನು ಕೇಳಿಸಲು ಅನುಮತಿಯನ್ನು ನಿರಾಕರಿಸಿದರು. ಇಷ್ಟಾದ ಬಳಿಕ ರಾಹುಲ್ ಧ್ವನಿಮುದ್ರಿಕೆಯ ಲಿಪ್ಯಂತರವನ್ನು ಓದಲು ಪ್ರಯತ್ನಿದರಾದರೂ ಅವರ ಧ್ವನಿವರ್ಧಕವನ್ನು ಎರಡು ಬಾರಿ ಸ್ಥಗಿತಗೊಳಿಸಲಾಯಿತು.

ರಫೇಲ್ ಒಪ್ಪಂದದ ಬಗ್ಗೆ ಜಂಟಿ ಸಂಸದೀಯ ಸಮಿತಿಯಿಂದ ತನಿಖೆಗೆ ಆಗ್ರಹಿಸಿದ ರಾಹುಲ್,ಸರ್ವೋಚ್ಚ ನ್ಯಾಯಾಲವು ತನ್ನ ತೀರ್ಪಿನಲ್ಲಿ ಜೆಪಿಸಿ ತನಿಖೆಯನ್ನು ತಳ್ಳಿಹಾಕಿಲ್ಲ ಎನ್ನುವುದನ್ನು ಬೆಟ್ಟು ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News