ಕೇರಳದಲ್ಲಿ ಇಂದು ಹರತಾಳಕ್ಕೆ ಕರೆ: ವಿವಿ ಪರೀಕ್ಷೆ ಮುಂದೂಡಿಕೆ

Update: 2019-01-03 05:01 GMT

ತಿರುವನಂತಪುರ, ಜ.3: ಕೇರಳದ ಇಬ್ಬರು ಭಕ್ತೆಯರಾದ ಬಿಂದೂ ಹಾಗೂ ಕನಕ ದುರ್ಗಾ ಶಬರಿಮಲೆ ದೇಗುಲವನ್ನು ಪ್ರವೇಶಿಸಿದ್ದನ್ನು ಖಂಡಿಸಿ ಶಬರಿಮಲೆ ಆ್ಯಕ್ಷನ್ ಕೌನ್ಸಿಲ್ ಗುರುವಾರ ರಾಜ್ಯವ್ಯಾಪಿ ಹರತಾಳಕ್ಕೆ ಕರೆ ನೀಡಿದೆ. ಹರತಾಳಕ್ಕೆ ಬಿಜೆಪಿ ಬೆಂಬಲ ನೀಡಿದ್ದು ರಾಜ್ಯ ಕಾಂಗ್ರೆಸ್ ಪಕ್ಷ ಕೂಡ ಪ್ರತಿಭಟನಾಕಾರರಿಗೆ ಸಾಥ್ ನೀಡಿದೆ. ಗುರುವಾರ ಕಪ್ಪು ದಿನ ಎಂದು ಕಾಂಗ್ರೆಸ್ ಹೇಳಿದೆ.

ಮಹಿಳೆಯರಿಬ್ಬರು ಅಯ್ಯಪ್ಪ ದೇಗುಲದೊಳಗೆ ಪ್ರವೇಶಿಸಿದ ಬಳಿಕ ಕೇರಳದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಮತ್ತೊಂದೆಡೆ ಮಹಿಳಾ ಪರ ಸಂಘಟನೆಗಳು ಸಂಭ್ರಮಾಚರಣೆ ನಡೆಸಿವೆ. ಬುಧವಾರ ಮಧ್ಯಾಹ್ನ ರಾಜ್ಯದ ಕೆಲವೆಡೆ ಬಲವಂತವಾಗಿ ಅಂಗಡಿ-ಮುಗ್ಗಟ್ಟುಗಳನ್ನು ಮುಚ್ಚಿಸಲಾಗಿದೆ. ಹಲವು ಬಸ್‌ಗಳಿಗೆ ಹಾನಿ ಮಾಡಲಾಗಿದೆ. ಮಾಧ್ಯಮಗಳ ಮೇಲೂ ದಾಳಿ ನಡೆಸಲಾಗಿದೆ.

ಗುರುವಾರ ಬೆಳಗ್ಗೆ ಹರತಾಳ ಆರಂಭವಾಗಿದೆ. ಕೋಯಿಕ್ಕೋಡ್‌ನಲ್ಲಿ ವಾಹನಗಳನ್ನು ತಡೆದು, ಬಸ್ ಮೇಲೆ ಕಲ್ಲುತೂರಾಟ ನಡೆಸಲಾಗಿದೆ. ಟಯರ್‌ಗಳಿಗೆ ಬೆಂಕಿ ಹೆಚ್ಚಲಾಗಿದೆ. ಆದರೆ, ವ್ಯಾಪಾರ ಸಂಘಟನೆಗಳು ಹರತಾಳಕ್ಕೆ ಬೆಂಬಲ ನೀಡದೇ ಎಂದಿನಂತೆ ತಮ್ಮ ಅಂಗಡಿಯನ್ನು ತೆರೆದಿಟ್ಟಿವೆ.

ಕೇರಳ, ಮಹಾತ್ಮಗಾಂಧಿ, ಕ್ಯಾಲಿಕಟ್ ಹಾಗೂ ಕಣ್ಣೂರು ವಿವಿಗಳಲ್ಲಿ ಗುರುವಾರ ನಡೆಯಬೇಕಾಗಿದ್ದ ಪರೀಕ್ಷೆಯನ್ನು ಮುಂದೂಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News