‘ವಂದೇ ಮಾತರಂ’ ಕಡ್ಡಾಯಕ್ಕೆ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರಿಗೇ ಹಾಡು ಗೊತ್ತಿಲ್ಲ!

Update: 2019-01-03 10:37 GMT

ಭೋಪಾಲ್, ಜ.3: ಮಧ್ಯಪ್ರದೇಶದಲ್ಲಿ `ವಂದೇ ಮಾತರಂ' ವಿವಾದವನ್ನು ಬಿಜೆಪಿಗರು ದೊಡ್ಡ ಸುದ್ದಿಯನ್ನಾಗಿಸಿದ್ದರೆ ಇದೀಗ ಅದೇ ಬಿಜೆಪಿಗರಿಗೆ ‘ವಂದೇಮಾತರಂ’ ಹಾಡನ್ನು ಪೂರ್ಣವಾಗಿ ಹಾಡಲು ತಿಳಿದಿಲ್ಲವೆಂಬ ಅಷ್ಟೇ ಮುಜುಗರಕಾರಿ ಸತ್ಯವೂ ಬೆಳಕಿಗೆ ಬಂದಿದೆ.

ಮಧ್ಯ ಪ್ರದೇಶದ ಸೆಕ್ರಟೇರಿಯಟ್ ನಲ್ಲಿ ಪ್ರತಿ ತಿಂಗಳ ಮೊದಲ ಕೆಲಸದ ದಿನದಂದು ‘ವಂದೇ ಮಾತರಂ’ ಹಾಡುವ ಸಂಪ್ರದಾಯವನ್ನು ಹಿಂದಿನ ಬಿಜೆಪಿ ಸರಕಾರ ಹನ್ನೆರಡು ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದರೆ ಹೊಸ ಕಾಂಗ್ರೆಸ್ ಸರಕಾರ ಅದನ್ನು ಕೈಬಿಟ್ಟಿರುವುದು ದೊಡ್ಡ ಸುದ್ದಿಯಾಗಿ ಬಿಟ್ಟಿದೆ. ಇದೀಗ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ತಾವು ಭೋಪಾಲ್ ನಲ್ಲಿ ಜನವರಿ 7ರಂದು 109 ಬಿಜೆಪಿ ಶಾಸಕರ ಜತೆ ಮಂತ್ರಾಲಯ ಮೈದಾನದಲ್ಲಿ ವಂದೇಮಾತರಂ ಹಾಡುವುದಾಗಿ ತಿಳಿಸಿದ್ದಾರೆ.

ಈ ನಡುವೆ ಬುಧವಾರ ಭೋಪಾಲದ ಸರ್ದಾರ್ ವಲ್ಲಭ ಭಾಯಿ ಪಟೇಲ್ ಪಾರ್ಕಿನಲ್ಲಿ ವಂದೇ ಮಾತರಂ ಹಾಡಲು ಸೇರಿದ್ದ ಪಕ್ಷದ ಸದಸ್ಯರು ಅದರ ಬದಲು ``ಇಸ್ ದೇಶ್ ಮೇ ರೆಹನಾ ಹೈ ತೋ ಭಾರತ್ ಮಾತಾ ಕೆಹನಾ ಹೈ'' ಎಂಬ ಘೋಷಣೆಗಳನ್ನು ಕೂಗಿದ್ದರು.

ಅಲ್ಲಿದ್ದ ಪತ್ರಕರ್ತರು ಅವರಿಗೆ ‘ವಂದೇಮಾತರಂ’ ಹಾಡುವಂತೆ ಹೇಳಿದಾಗ ಒಬ್ಬರಿಗೂ ಹಾಡು ಸರಿಯಾಗಿ ಬರುತ್ತಿರಲಿಲ್ಲ. ಶಾಸಕರಾದ ರಾಮೇಶ್ವರ್ ಶರ್ಮ, ವಿಶ್ವಾಸ್ ಸಾರಂಗ್, ಕೃಷ್ಣ ಗೌರ್ ಹಾಗೂ ಸುರೇಂದ್ರ ನಾಥ್  ಸಿಂಗ್ ಕೂಡ ಈ ಸಂದರ್ಭ ಹಾಜರಿದ್ದುದು ವಿಶೇಷ.

ಮೂವರು ಪಕ್ಷದ ಕಾರ್ಯಕರ್ತೆಯರು ವಂದೇ ಮಾತರಂ ಹಾಡಲು ಆರಂಭಿಸಿದರೂ ಕೆಲ ಪ್ರಮುಖ ಶಾಸಕರಿಗೆ  ಮಾತ್ರ ಸಂಪೂರ್ಣ ಹಾಡು ಬರುತ್ತಿರಲಿಲ್ಲ. ಸುರೇಂದ್ರ ನಾಥ್ ಸಿಂಗ್ ಕೂಡ ತಮಗೆ ಇಡೀ  ಹಾಡು ತಿಳಿದಿಲ್ಲ ಎಂದು ಹೇಳಿದರೂ  ತಾವು ಹಾಡನ್ನು ಗೌರವಿಸುವುದಾಗಿ ತಿಳಿಸಿದರು.

ಅತ್ತ ರಾಮೇಶ್ವರ್ ಶರ್ಮ ತಮಗೆ ಮೊದಲ ಚರಣ ಮಾತ್ರ ಬರುವುದಾಗಿ ಹೇಳಿದರಲ್ಲದೆ ಎಲ್ಲರೂ ಒಟ್ಟಾಗಿ ಹಾಡಿದರೆ ಹಾಡಬಹುದು ಒಬ್ಬರೇ ಹಾಡಿದರೆ ಸಾಧ್ಯವಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News