ಗಣಿಯ ನೀಲನಕ್ಷೆಯಿಲ್ಲದೆ ಸಮಸ್ಯೆಯಾಗಿದೆ: ಸರಕಾರ

Update: 2019-01-04 18:05 GMT

ಹೊಸದಿಲ್ಲಿ, ಜ.4: ಡಿಸೆಂಬರ್ 13ರಿಂದ ಮೇಘಾಲಯದ ಗಣಿಯಲ್ಲಿ ಸಿಲುಕಿಕೊಂಡಿರುವ 15 ಕಾರ್ಮಿಕರ ರಕ್ಷಣೆ ಕಾರ್ಯಾಚರಣೆಗೆ ಗಣಿಯ ನೀಲನಕ್ಷೆ ಇಲ್ಲದಿರುವುದು ಬಹುದೊಡ್ಡ ತೊಡಕಾಗಿದೆ ಎಂದು ಸರಕಾರದ ಪ್ರತಿನಿಧಿಯಾಗಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂಕೋರ್ಟ್‌ಗೆ ತಿಳಿಸಿದ್ದಾರೆ.

ಮೇಘಾಲಯದ ಈಸ್ಟ್ ಜೈಂಟಿಯಾ ಹಿಲ್ಸ್ ಜಿಲ್ಲೆಯಲ್ಲಿರುವ 355 ಅಡಿ ಆಳದ ಈ ಗಣಿಯು ಗುಡ್ಡದ ಮೇಲಿದ್ದು ಮರಗಳಿಂದ ಆವೃತ್ತವಾಗಿದೆ. ಸಮೀಪದಲ್ಲಿರುವ ಲೀಟೆನ್ ನದಿಯಲ್ಲಿ ನೆರೆನೀರು ಉಕ್ಕಿ ಹರಿದ ಕಾರಣ ಗಣಿಯೊಳಗೆ ನೀರು ನುಗ್ಗಿದ್ದು ಅದರೊಳಗೆ 15 ಕಾರ್ಮಿಕರು ಸಿಕ್ಕಿಹಾಕಿಕೊಂಡಿದ್ದಾರೆ. ಇಲ್ಲಿರುವುದು ರ್ಯಾಟ್‌ಹೋಲ್ ಮೈನ್(ಇಲಿ ರಂಧ್ರ ಗಣಿ). ರ್ಯಾಟ್‌ಹೋಲ್ ಮೈನ್ ಎಂದರೆ ಇಲಿಗಳು ಕೊರೆಯುವಂತಹ ಬಿಲಗಳಿಂದ ಮಾಡಿರುವ ಅಕ್ರಮ ಗಣಿ. ಹೆಚ್ಚಾಗಿ ಈಶಾನ್ಯ ಭಾರತದಲ್ಲಿ, ಅದರಲ್ಲೂ ವಿಶೇಷವಾಗಿ ಮೇಘಾಲಯದಲ್ಲಿ ಸ್ಥಳೀಯ ಕುಟುಂಬದವರು ಅಥವಾ ಒಂದು ಸಮುದಾಯದವರು ಸೇರಿಕೊಂಡು ನೆಲದಲ್ಲಿ ಇಲಿಗಳಂತೆ ರಂಧ್ರ ಕೊರೆದು ನೆಲದೊಳಗೆ ಸಿಗುವ ಸಂಪನ್ಮೂಲಗಳನ್ನು ಬುಟ್ಟಿ ಅಥವಾ ಚೀಲದಲ್ಲಿ ಸಂಗ್ರಹಿಸಿ ತಂದು ಮಾರುತ್ತಾರೆ.

ಇವು ಅತ್ಯಂತ ದೂರದ ಮಟ್ಟಕ್ಕೆ ತಲುಪುತ್ತದೆ. ಈ ಗಣಿಗಳಿಗೆ ಪರವಾನಿಗೆ ಪಡೆಯುವುದಿಲ್ಲ ಮತ್ತು ಯಾವುದೇ ನೀಲನಕ್ಷೆ ಇರುವುದಿಲ್ಲ. ಹೀಗೆ ಕೊರೆದ ಸುರಂಗಗಳು ಸಾಮಾನ್ಯವಾಗಿ ನಾಲ್ಕು ಅಡಿ ಎತ್ತರವಿರುತ್ತದೆ. ಸಮತಲವಾದ ಈ ಸುರಂಗದೊಳಗೆ ಒಮ್ಮೆಗೆ ಒಬ್ಬ ವ್ಯಕ್ತಿ ಮಾತ್ರ ಪ್ರವೇಶಿಸಲು ಸಾಧ್ಯವಾಗುವ ಕಾರಣ ಇವನ್ನು ಇಲಿರಂಧ್ರ ಗಣಿ ಎನ್ನಲಾಗುತ್ತದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ(ಎನ್‌ಡಿಆರ್‌ಎಫ್)ದ ಹಲವು ಸದಸ್ಯರು ಗಣಿಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗಣಿಯಲ್ಲಿ ನೀರು ತುಂಬಿಕೊಂಡಿರುವ ಕಾರಣ ಸೇನೆಯ ಬದಲು ನೌಕಾಪಡೆಯ ಸಿಬ್ಬಂದಿಗಳನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ ಎಂದು ಸರಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ಎನ್‌ಡಿಆರ್‌ಎಫ್‌ನ 72 ಸದಸ್ಯರಿದ್ದೂ ಯಾವುದೇ ಫಲವಿಲ್ಲ. ಸೇನಾಪಡೆಯ ನೆರವನ್ನು ಯಾಕೆ ಪಡೆಯುತ್ತಿಲ್ಲ. ನೀರೆತ್ತುವ ಪಂಪ್‌ಗಳನ್ನು ಥಾಯ್ಲಂಡಿನ ಗುಹೆಯಲ್ಲಿ ಇತ್ತೀಚೆಗೆ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಬಳಸಲಾಗಿದೆ ಎಂದು ಅರ್ಜಿದಾರರು ಹೇಳುತ್ತಿದ್ದಾರೆ. ಅಂತಹ ಪಂಪ್‌ಗಳನ್ನು ಇಲ್ಲಿ ಯಾಕೆ ಬಳಸುತ್ತಿಲ್ಲ ಎಂದು ಸುಪ್ರೀಂ ಪ್ರಶ್ನಿಸಿದೆ.

2018ರ ಜೂನ್‌ನಲ್ಲಿ ಥಾಯ್ಲಂಡಿನ ಗುಹೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಫುಟ್‌ಬಾಲ್ ತಂಡದ ಬಾಲಕರ ರಕ್ಷಣೆಗೆ ನಡೆದ ಕಾರ್ಯಾಚರಣೆಯಲ್ಲಿ ಕಿರ್ಲೋಸ್ಕರ್ ಸಂಸ್ಥೆ ಅಧಿಕ ಕ್ಷಮತೆಯ ನೀರೆತ್ತುವ ಪಂಪ್‌ಗಳನ್ನು ಕಳಿಸಿಕೊಟ್ಟಿದೆ. ಆ ಪಂಪ್‌ಗಳನ್ನು ಇಲ್ಲಿ ಯಾಕೆ ಬಳಸಬಾರದು ಎಂದು ಅರ್ಜಿ ದಾಖಲಿಸಿರುವ ಆದಿತ್ಯ ಎನ್. ಪ್ರಸಾದ್ ಪ್ರಶ್ನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News