ಡಾರ್ವಿನ್‌ಗಿಂತ ದಶಾವತಾರದ ಜೀವ ವಿಕಾಸವಾದ ಉತ್ತಮ ಎಂದ ಆಂಧ್ರ ವಿವಿ ಕುಲಪತಿ

Update: 2019-01-05 15:14 GMT

ಜಲಂಧರ್ (ಪಂಜಾಬ್),ಜ.5: ಹಿಂದು ಪುರಾಣ ಗ್ರಂಥ ಭಗವದ್ಗೀತೆಯಲ್ಲಿ ಮಹಾವಿಷ್ಣುವಿನ ಹತ್ತು ಅವತಾರಗಳನ್ನು ನಿರೂಪಿಸಿರುವ ದಶಾವತಾರವು 17ನೇ ಶತಮಾನದ ಬ್ರಿಟಿಷ್ ಜೀವವಿಜ್ಞಾನಿ ಚಾರ್ಲ್ಸ್ ಡಾರ್ವಿನ್ ಮಂಡಿಸಿದ್ದ ಜೀವ ವಿಕಾಸವಾದಕ್ಕಿಂತ ಉತ್ತಮವಾಗಿದೆ ಎಂದು ಆಂಧ್ರ ವಿವಿ ಕುಲಪತಿ ಜಿ.ನಾಗೇಶ್ವರ ರಾವ್ ಅವರು ಪ್ರತಿಪಾದಿಸಿದ್ದಾರೆ.

ಇಲ್ಲಿ ಭಾರತೀಯ ವಿಜ್ಞಾನ ಸಮ್ಮೇಳನದಲ್ಲಿ ಭಾಷಣ ಮಾಡಿದ ರಾವ್,ಡಾರ್ವಿನ್‌ನ ಸಿದ್ಧಾಂತವು ಸಮುದ್ರ ಪ್ರಾಣಿಯಿಂದ ಮಾನವನವರೆಗೆ ಜೀವ ವಿಕಾಸದ ಕುರಿತು ಹೇಳಿದರೆ ದಶಾವತಾರವು ರಾಮನಿಂದ ರಾಜಕೀಯ ಸೂಕ್ಷ್ಮತೆಯನ್ನು ಹೊಂದಿದ್ದ ಕೃಷ್ಣನವರೆಗೆ ಪರಿವರ್ತನೆಯನ್ನು ತೋರಿಸುವ ಮೂಲಕ ಒಂದು ಹೆಜ್ಜೆ ಮುಂದೆಯೇ ಇದೆ ಎಂದು ಹೇಳಿದರು.

ದಶಾವತಾರವು ಸಮುದ್ರ ಪ್ರಾಣಿಯಾದ ‘ಮತ್ಸಾವತಾರ ’ದೊಂದಿಗೆ ಆರಂಭಗೊಳ್ಳುತ್ತದೆ. ಬಳಿಕ ಉಭಯಚರಿಯಾಗಿರುವ ‘ಕೂರ್ಮಾವತಾರ ’ದ ಬಗ್ಗೆ ಹೇಳುತ್ತದೆ. ಮೂರನೆಯದು ‘ವರಾಹಾವತಾರ’ ವಾಗಿದ್ದು,ಇಲ್ಲಿ ಮಹಾವಿಷ್ಣು ಭೂಮಿಯನ್ನು ರಕ್ಷಿಸಲು ವರಾಹವಾಗುತ್ತಾನೆ. ನಾಲ್ಕನೆಯದು ‘ನರಸಿಂಹಾವತಾರ ’ವಾಗಿದ್ದು ಇಲ್ಲಿ ಮಹಾವಿಷ್ಣುವು ಅರ್ಧ ಸಿಂಹ ಮತ್ತು ಅರ್ಧ ಮಾನವ ರೂಪವನ್ನು ಧರಿಸುತ್ತಾನೆ. ಐದನೆಯದು ‘ವಾಮನಾವತಾರ ’ವಾಗಿದ್ದು,ಇಲ್ಲಿ ಕುಬ್ಜ ವಾಮನ ಅಲ್ಪ ಪಕ್ವತೆಯೊಂದಿಗೆ ಸಂಪೂರ್ಣ ಮಾನವ ಜೀವಿಯಾಗಿದ್ದಾನೆ. ಕೊನೆಯಲ್ಲಿ ಪ್ರಬುದ್ಧ ವ್ಯಕ್ತಿಯಾದ ರಾಮನ ಅವತಾರವಾಗುತ್ತದೆ ಮತ್ತು ನಂತರ ಮಹಾವಿಷ್ಣು ಕೃಷ್ಣನ ಅವತಾರವನ್ನೆತ್ತಿದ್ದಾನೆ. ಇಲ್ಲಿ ಕೃಷ್ಣ ಹೆಚ್ಚು ಜ್ಞಾನಿ,ತಾರ್ಕಿಕತೆಯನ್ನು ಹೊಂದಿದ್ದು ರಾಜಕೀಯ ಪ್ರೌಢಿಮೆಯನ್ನು ಪಡೆದಿದ್ದಾನೆ. ಕೃಷ್ಣನನ್ನು ರಾಜಕಾರಣಿ ಎಂದು ನಾವು ನಂಬುತ್ತೇವೆಯೇ ಹೊರತು ರಾಮನನ್ನಲ್ಲ. ಈ ಜೀವ ವಿಕಾಸ ವಾದ ಹೀಗೆಯೇ ಸಾಗುತ್ತದೆ ಎಂದು ರಾವ್ ವಿವರಿಸಿದರು.

ಪಾಶ್ಚಿಮಾತ್ಯ ಚಿಂತನೆಯು ಮಾನವನ ಉಗಮದ ಸುತ್ತವೇ ಗಿರಕಿ ಹೊಡೆದಿದೆ ಎಂದು ಒತ್ತಿ ಹೇಳಿದ ಅವರು,ಆದರೆ ನಮ್ಮ ವಿಜ್ಞಾನವು ಮಾನವ ಜೀವಿಗಳು ಸಮುದ್ರ ಪ್ರಾಣಿಗಳು ಎಂದು ಸಾಧಿಸುವುದು ಮಾತ್ರವಲ್ಲ,ಅದರಾಚೆಗೂ ಅದರ ವ್ಯಾಪ್ತಿ ವಿಸ್ತರಿಸಿದೆ. ವಾಮನ ಅವತಾರದ ಕಾಲದಲ್ಲಿ ನಾವು ಮಾನವ ಜೀವಿಗಳಾಗಿದ್ದೆವು,ಆದರೆ ಅದರಾಚೆಗೆ ನಾವು ಪ್ರಬುದ್ಧ ಮಾನವರಾಗಿದ್ದೆವು, ನಮ್ಮ ಚಿಂತನೆಯೂ ಬೆಳೆದಿತ್ತು. ಹೀಗಾಗಿಯೇ ನಮ್ಮ ಸಾಧುಸಂತರು ಡಾರ್ವಿನ್ ಸಿದ್ಧಾಂತಕ್ಕಿಂತ ದಶಾವತಾರವು ಉತ್ತಮ ಜೀವ ವಿಕಾಸವಾದವಾಗಿದೆ ಎಂದಿದ್ದಾರೆ ಎಂದರು.

ಕೌರವರು ಕಾಂಡ ಕೋಶ ಮತ್ತು ಪ್ರನಾಳ ತಂತ್ರಜ್ಞಾನಗಳಿಂದ ಜನಿಸಿದ್ದರು ಮತ್ತು ಭಾರತವು ಸಾವಿರಾರು ವರ್ಷಗಳ ಹಿಂದೆಯೇ ನಿರ್ದೇಶಿತ ಕ್ಷಿಪಣಿಗಳ ತಂತ್ರಜ್ಞಾನವನ್ನು ಹೊಂದಿತ್ತು ಎಂದೂ ರಾವ್ ಪ್ರತಿಪಾದಿಸಿದರು.

ತಮ್ಮ ಗುರಿಗಳನ್ನು ಬೆನ್ನಟ್ಟಲು ರಾಮ ‘ಅಸ್ತ್ರಗಳು’ ಮತ್ತು ‘ಶಸ್ತ್ರಗಳನ್ನು’ ಬಳಸಿದ್ದರೆ,ಕೃಷ್ಣ ‘ಸುದರ್ಶನ ಚಕ್ರ’ವನ್ನು ಬಳಸುತ್ತಿದ್ದ. ಅವು ತಮ್ಮ ಗುರಿಗಳ ಮೇಲೆ ದಾಳಿ ಮಾಡಿದ ಬಳಿಕ ಅವರ ಬಳಿಗೆ ಮರಳುತ್ತಿದ್ದವು. ಇದು ನಿರ್ದೇಶಿತ ಕ್ಷಿಪಣಿಗಳ ತಂತ್ರಜ್ಞಾನ ಭಾರತಕ್ಕೆ ಹೊಸದಲ್ಲ ಮತ್ತು ಸಾವಿರಾರು ವರ್ಷಗಳ ಹಿಂದೆಯೇ ಬಳಕೆಯಲ್ಲಿತ್ತು ಎನ್ನುವುದನ್ನು ತೋರಿಸುತ್ತದೆ ಎಂದ ಅವರು,ರಾವಣ ಕೇವಲ ‘ಪುಷ್ಪಕ ವಿಮಾನ ’ವನ್ನು ಮಾತ್ರ ಹೊಂದಿರಲಿಲ್ಲ,ಆತನ ಬಳಿ ವಿವಿಧ ಗಾತ್ರಗಳು ಮತ್ತು ಸಾಮರ್ಥ್ಯಗಳ 24 ವಿಧಗಳ ವಿಮಾನಗಳಿದ್ದವು ಎಂದು ರಾಮಾಯಣವು ಹೇಳಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News