ಅಂಡಮಾನ್‌ನತ್ತ ಚಲಿಸಿದ ಚಂಡಮಾರುತ ಪಬುಕ್: ಹಳದಿ ಎಚ್ಚರಿಕೆ ಘೋಷಣೆ

Update: 2019-01-05 16:19 GMT

ಹೊಸದಿಲ್ಲಿ, ಜ.5: ಪಬುಕ್ ಚಂಡಮಾರುತ ಅಂಡಮಾನ್ ದ್ವೀಪ ಸಮೂಹದತ್ತ ಚಲಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಅಂಡಮಾನ್ ಮತ್ತು ನಿಕೊಬಾರ್ ದ್ವೀಪ ಸಮೂಹದಲ್ಲಿ ಹಳದಿ ಎಚ್ಚರಿಕೆ ರವಾನಿಸಲಾಗಿದೆ.

ಚಂಡಮಾರುತದ ಹಿನ್ನೆಲೆಯಲ್ಲಿ ಅಂಡಮಾನ್ ದ್ವೀಪಗಳು, ಅಂಡಮಾನ್ ಸಮುದ್ರ ಮತ್ತು ಬಂಗಾಳ ಕೊಲ್ಲಿಯ ಪೂರ್ವ ಕೇಂದ್ರ ಮತ್ತು ಆಗ್ನೇಯ ಭಾಗದಲ್ಲಿ ಜನವರಿ ಏಳರವರೆಗೆ ಸಮುದ್ರವು ಪ್ರಕ್ಷುಬ್ಧವಾಗಿರಲಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ. ಥೈಲ್ಯಾಂಡ್‌ನ ಸಮುದ್ರದಲ್ಲಿ ಕಾಣಿಸಿಕೊಂಡ ಪಬುಕ್ ಗಂಟೆಗೆ ಹತ್ತು ಕಿ.ಮೀ ವೇಗದಲ್ಲಿ ಸಾಗಿ ಸುತ್ತಮುತ್ತಲ ಪ್ರದೇಶಗಳಿಗೆ ವ್ಯಾಪಿಸಿದೆ.

ರವಿವಾರದಂದು ನಿಕೊಬಾರ್ ದ್ವೀಪಗಳ ಸಮೀಪ ಸಮುದ್ರವು ಬಹಳ ಪ್ರಕ್ಷುಬ್ಧವಾಗಿರಲಿದೆ. ಅಂಡಮಾನ್ ದ್ವೀಪದ ಜನರು ಸುರಕ್ಷಿತ ಪ್ರದೇಶಗಳಲ್ಲಿ ಇರುವಂತೆ ಸಚಿವಾಲಯ ಸೂಚಿಸಿದೆ. ಅಂಡಮಾನ್ ಹಾಗೂ ಸುತ್ತಮುತ್ತಲ ಸಮುದ್ರದಲ್ಲಿ ಜನವರಿ ಎಂಟರ ತನಕ ಮೀನುಗಾರಿಕೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಬೆಸ್ತರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಚಂಡಮಾರುತ ಉತ್ತರದ ಉತ್ತರ ವಾಯುವ್ಯದತ್ತ ಸಾಗಿ ನಂತರ ಈಶಾನ್ಯದತ್ತ ತಿರುಗಿ ಮ್ಯಾನ್ಮಾರ್ ಕರಾವಳಿಯತ್ತ ಸಾಗಿ ದುರ್ಬಲಗೊಳ್ಳಲಿದೆ ಎಂದು ಹವಾಮಾನ ಇಲಾಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News