ಮಹಾಮೈತ್ರಿ ಸೇರುವುದಿಲ್ಲ: ಒಡಿಶಾ ಸಿಎಂ ನವೀನ್ ಪಟ್ನಾಯಕ್

Update: 2019-01-09 12:56 GMT

ಹೊಸದಿಲ್ಲಿ, ಜ. 9: ಮಹಾಮೈತ್ರಿ ವಿಚಾರದಲ್ಲಿ ತೀರ್ಮಾನ ಕೈಗೊಳ್ಳಲು ಹೆಚ್ಚಿನ ಸಮಯಾವಕಾಶಬೇಕು ಎಂದು ಹೇಳಿದ ಮರುದಿನವೇ ತಾವು ಮಹಾಮೈತ್ರಿಯ ಭಾಗವಾಗುವುದಿಲ್ಲ ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹೇಳಿದ್ದಾರೆ.

''ಬಿಜು ಜನತಾ ದಳ ಮಹಾಮೈತ್ರಿಯ ಭಾಗವಾಗುವುದಿಲ್ಲ ಎಂದು ಸ್ಪಷ್ಟ ಪಡಿಸಬಯಸುತ್ತೇನೆ'' ಎಂದು ಅವರು ಹೇಳಿದ್ದಾರೆ. ತಮ್ಮ ಪಕ್ಷ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಂದ ಸಮಾನ ಅಂತರ ಕಾಯ್ದುಕೊಳ್ಳುವುದೆಂದೂ ಅವರು ತಿಳಿಸಿದರು.

ರಾಷ್ಟ್ರಪತಿ ಚುನಾವಣೆ ವೇಳೆ ಎನ್‍ಡಿಎಗೆ ಬೆಂಬಲ ವ್ಯಕ್ತಪಡಿಸಿದ್ದ ಪಟ್ನಾಯಕ್ ಮುಂದೆ ಉಪರಾಷ್ಟ್ರಪತಿ ಚುನಾವಣೆ ವೇಳೆ  ವಿಪಕ್ಷ ಶಿಬಿರ ಸೇರಿ ಕೊಂಡಿದ್ದರು. ಆದರೆ ವೆಂಕಯ್ಯ ನಾಯ್ಡು ಅವರ ವಿಜಯದ ಅಂತರವನ್ನು ಗಮನಿಸಿ ತಮ್ಮ ಪಕ್ಷದ ಹಲವು ಶಾಸಕರು ಅಡ್ಡ ಮತದಾನ ಮಾಡಿರಬಹುದೆಂಬ ಸಂಶಯವನ್ನು ಅವರು ವ್ಯಕ್ತಪಡಿಸಿದ್ದರು.

ಕಳೆದ ಆಗಸ್ಟ್ ತಿಂಗಳಲ್ಲಿ ನಡೆದ ರಾಜ್ಯಸಭಾ ಉಪಾಧ್ಯಕ್ಷ ಹುದ್ದೆ ಚುನಾವಣೆಯಲ್ಲಿ ಬಿಜು ಜನತಾದಳ ಎನ್‍ಡಿಎ ಅಭ್ಯರ್ಥಿ ಹರಿವಂಶ್ ನಾರಾಯಣ್ ಸಿಂಗ್ ಅವರನ್ನು ಬೆಂಬಲಿಸಿತ್ತು. ಪ್ರಧಾನಿ ನರೇಂದ್ರ ಮೋದಿ ನವೀನ್ ಪಟ್ನಾಯಕ್ ಅವರ ಜತೆ ದೂರವಾಣಿಯಲ್ಲಿ ಮಾತನಾಡಿದ ನಂತರ ಈ  ಬೆಳವಣಿಗೆ ನಡೆದಿತ್ತು. ಬಿಜೆಡಿಯ ಎಂಟು ಮತಗಳಿಂದಾಗಿ ಬಿಜೆಪಿ ಈ ಚುನಾವಣೆಯನ್ನು ಗೆಲ್ಲುವುದು ಸಾಧ್ಯವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News