2ನೇ ದಿನದ ಭಾರತ್ ಬಂದ್ ಪ್ರತಿಭಟನೆ: ಕೆಲವೆಡೆ ಬ್ಯಾಂಕಿಂಗ್ ಸೇವೆಗೆ ತೊಡಕು

Update: 2019-01-09 18:01 GMT

ಹೊಸದಿಲ್ಲಿ, ಜ.9: ಕಾರ್ಮಿಕ ವಿರೋಧಿ ನೀತಿ ಮತ್ತು ಏಕಪಕ್ಷೀಯ ಕಾರ್ಮಿಕ ಸುಧಾರಣೆ ನೀತಿಗಳನ್ನು ವಿರೋಧಿಸಿ ಸಿಟಿಯು (ಸೆಂಟ್ರಲ್ ಟ್ರೇಡ್ ಯೂನಿಯನ್) ನೇತೃತ್ವದಲ್ಲಿ ನಡೆದ ಭಾರತ್ ಬಂದ್ ಎರಡನೇ ದಿನದ ಪ್ರತಿಭಟನೆಯಿಂದ ದೇಶದ ಕೆಲವೆಡೆ ಸಾಮಾನ್ಯ ಜನಜೀವನದ ಮೇಲೆ ಪರಿಣಾಮ ಬೀರಿದೆ. ಕೆಲವು ರಾಜ್ಯಗಳಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಹಾಗೂ ಬ್ಯಾಂಕಿಂಗ್ ಸೇವೆಗೆ ತೊಡಕಾಗಿದೆ ಎಂದು ವರದಿಯಾಗಿದೆ. 18 ಸಾವಿರ ರೂ. ಕನಿಷ್ಟ ವೇತನ, ಎಲ್ಲಾ ಉದ್ಯೋಗಿಗಳಿಗೂ ಸಾಮಾಜಿಕ ಭದ್ರತೆ ಸೇರಿದಂತೆ 12 ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ 10 ಸಿಟಿಯುಗಳ ನೇತೃತ್ವದಲ್ಲಿ ಎರಡು ದಿನ ಪ್ರತಿಭಟನೆ ನಡೆದಿದೆ.

ಬುಧವಾರ ಮಂಡಿಹೌಸ್‌ನಿಂದ ಸಂಸತ್ ಭವನದವರೆಗೆ ಕಾರ್ಮಿಕರು ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡರು. ಇದೇ ರೀತಿಯ ಪ್ರತಿಭಟನೆ ದೇಶದ ಇತರೆಡೆ ಕೂಡಾ ನಡೆಯಿತು.

ಈ ಸಂದರ್ಭ ಮಾಧ್ಯಮದ ಜೊತೆ ಮಾತನಾಡಿದ ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಅಮರ್‌ಜೀತ್ ಕೌರ್, ಯುಜಿಸಿ ಪರೀಕ್ಷೆ ನಡೆಯುತ್ತಿರುವ ಕಾರಣ, ವಿದ್ಯಾರ್ಥಿಗಳ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಕೆಲವು ರಾಜ್ಯಗಳ ಸಾರಿಗೆ ಸಂಸ್ಥೆಯ ನೌಕರರು ಬಂದ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ತಿಳಿಸಿದರು. ಕೇಂದ್ರ ಸರಕಾರ ಉದ್ಯೋಗ ಸೃಷ್ಟಿಸಲು ವಿಫಲವಾಗಿದೆ ಮತ್ತು ತಮ್ಮ 12 ಅಂಶಗಳ ಬೇಡಿಕೆಯ ಬಗ್ಗೆ ನಿರ್ಲಕ್ಷದ ಧೋರಣೆ ತಳೆದಿದೆ. ಅಲ್ಲದೆ 2015ರ ಸೆಪ್ಟೆಂಬರ್ 2ರ ಬಳಿಕ ವಿತ್ತ ಸಚಿವ ಅರುಣ್ ಜೇಟ್ಲಿ ನೇತೃತ್ವದ ಸಚಿವರ ತಂಡವು ಕಾರ್ಮಿಕರ ಸಮಸ್ಯೆಗಳ ಬಗ್ಗೆ ತಮ್ಮೆಡನೆ ಚರ್ಚಿಸಿಲ್ಲ ಎಂದು ಕಾರ್ಮಿಕರ ಒಕ್ಕೂಟ ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News