ಮೊಸಳೆಯ ಸಾವಿಗೆ ಕಂಬನಿ ಮಿಡಿದ ಗ್ರಾಮಸ್ಥರು !

Update: 2019-01-10 16:47 GMT

► ಇದು ಅಪರೂಪದ ಪ್ರೀತಿಯ ಕಥೆ

ರಾಯ್‌ಪುರ, ಜ.10: ಛತ್ತೀಸ್‌ಗಢದ ಬೆಮೆತ್ರ ಜಿಲ್ಲೆಯ ಬಾವಮೊಹಾತ್ರ ಗ್ರಾಮದಲ್ಲಿ ಕಳೆದ 130 ವರ್ಷಗಳಿಂದ ಜನರ ಪ್ರೀತಿಪಾತ್ರವಾಗಿದ್ದ ಗಂಗಾರಾಮ್ ಎಂಬ ಹೆಸರಿನ ಮೊಸಳೆ ಮಂಗಳವಾರ ಕೊನೆಯುಸಿರೆಳೆದಿದ್ದು, ಗ್ರಾಮಸ್ಥರು ಅಂತ್ಯಸಂಸ್ಕಾರ ನಡೆಸಿ ಮೊಸಳೆಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

 ಮೂರು ಮೀಟರ್‌ಗೂ ಉದ್ದದ ಮೊಸಳೆಯ ಅಂತ್ಯಸಂಸ್ಕಾರ ಸುಮಾರು 500ಕ್ಕೂ ಹೆಚ್ಚು ಜನರ ಉಪಸ್ಥಿತಿಯಲ್ಲಿ ಜರಗಿದೆ. ಹೂವಿನ ಮಾಲೆಗಳಿಂದ ಅಲಂಕೃತವಾಗಿದ್ದ ಟ್ರ್ಯಾಕ್ಟರ್‌ನಲ್ಲಿ ಮೊಸಳೆಯ ಮೃತದೇಹವನ್ನು ಕೊಂಡೊಯ್ದು ಅಂತ್ಯಸಂಸ್ಕಾರ ನಡೆಸಲಾಗಿದೆ. ಗಂಗಾರಾಮ್‌ನನ್ನು ಸ್ಥಳೀಯರು ದೇವರ ದೂತ ಎಂದೇ ಭಾವಿಸಿದ್ದರು. ಈತ ಹೊಳೆಯಲ್ಲಿದ್ದಾಗ ಬಳಿಯಲ್ಲಿಯೇ ಸಣ್ಣ ಮಕ್ಕಳು ಕೂಡಾ ಯಾವುದೇ ಅಂಜಿಕೆಯಿಲ್ಲದೆ ಈಜುತ್ತಿದ್ದರು. ತನ್ನ ಜೀವಿತಾವಧಿಯಲ್ಲಿ ಈ ಮೊಸೆಳೆ ಯಾರ ಮೇಲೂ ಆಕ್ರಮಣ ನಡೆಸಿಲ್ಲ ಎಂದು ಬಸವಾನ್ ಎಂಬ ಸ್ಥಳೀಯ ವ್ಯಕ್ತಿ ಹೇಳಿದ್ದಾನೆ.

ಗಂಗಾರಾಮ್‌ಗೆ ಒಳ್ಳೆಯ ತಿಳುವಳಿಕೆಯಿತ್ತು. ತನ್ನ ಬಳಿಯಲ್ಲಿಯೇ ಯಾರಾದರೂ ಈಜುತ್ತಿರುವುದನ್ನು ಕಂಡೊಡನೆ ಕೆರೆಯ ಮತ್ತೊಂದು ಬದಿಗೆ ಹೋಗುತ್ತಿದ್ದ. ಪ್ರತೀ ದಿನ ಗ್ರಾಮಸ್ಥರು ಮತ್ತು ಮಕ್ಕಳು ಅನ್ನ ಮತ್ತು ದಾಲ್ ನೀಡುತ್ತಿದ್ದರು. ಅದನ್ನು ತಿನ್ನುತ್ತಿದ್ದ. ಈತನಿಂದಾಗಿ ಈ ಗ್ರಾಮಕ್ಕೆ ‘ಮೊಸಳೆಯ ಗ್ರಾಮ’ ಎಂಬ ಹೆಸರು ಬಂದಿತ್ತು ಎಂದು ಗ್ರಾಮದ ಮುಖ್ಯಸ್ಥ ಮೋಹನ್ ಸಾನು ಹೇಳಿದ್ದಾರೆ.

ಗ್ರಾಮಸ್ಥರಿಗೆ ಮೊಸಳೆಯ ಜೊತೆ ಭಾವನಾತ್ಮಕ ಅನುರಕ್ತಿ ಬೆಳೆದಿದ್ದ ಕಾರಣ ಮೊಸಳೆಯ ಮೃತದೇಹವನ್ನು ಗ್ರಾಮಸ್ಥರಿಗೆ ಹಸ್ತಾಂತರಿಸಿದ್ದೇವೆ. ಅವರು ಮೊಸಳೆಯ ಅಂತ್ಯಸಂಸ್ಕಾರದ ಸ್ಥಳದಲ್ಲಿ ಸ್ಮಾರಕ ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದಾರೆ ಎಂದು ಉಪವಿಭಾಗೀಯ ಅರಣ್ಯಾಧಿಕಾರಿ ಆರ್‌ಕೆ ಸಿನ್ಹ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News