ಸಮಾನ ಮನಸ್ಕ ಪಕ್ಷಗಳು ಒಗ್ಗೂಡಬೇಕು: ಕೆಟಿ ರಾಮರಾವ್

Update: 2019-01-16 17:50 GMT

ಹೈದರಾಬಾದ್, ಜ.16: ಸಂಯುಕ್ತ ರಂಗ ಸ್ಥಾಪಿಸಲು ಸಮಾನ ಪಕ್ಷಗಳು ಒಗ್ಗೂಡುವ ಅಗತ್ಯವಿದೆ ಎಂದು ತೆಲಂಗಾಣ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಕೆ.ಟಿ.ರಾಮರಾವ್ ಹೇಳಿದ್ದಾರೆ.

ವೈಎಸ್‌ಆರ್‌ಸಿ ಪಕ್ಷದ ಅಧ್ಯಕ್ಷ ಜಗನ್‌ಮೋಹನ್ ರೆಡ್ಡಿಯನ್ನು ಹೈದರಾಬಾದ್‌ನಲ್ಲಿ ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ರಾಮರಾವ್, ಈ ಕುರಿತು ತಾವು ಈಗಾಗಲೇ ಕರ್ನಾಟಕ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿಯವರೊಂದಿಗೆ ಮಾತನಾಡಿದ್ದೇನೆ ಎಂದರು. ರಾಮರಾವ್ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಪುತ್ರ. ಇವರೊಂದಿಗೆ ಟಿಆರ್‌ಎಸ್ ಸಂಸದ ಬಿ.ವಿನೋದ್ ಕುಮಾರ್, ಹಿರಿಯ ಮುಖಂಡ ಪಲ್ಲ ರಾಜೇಶ್ವರ ರೆಡ್ಡಿ ತಂಡದಲ್ಲಿದ್ದರು. ಉಭಯ ಪಕ್ಷಗಳ ನಡುವೆ ನಡೆದ ಪ್ರಪ್ರಥಮ ನೇರ ಸಭೆ ಇದಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಆಂಧ್ರದಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುರನ್ನು ಸೋಲಿಸಲು ಯಾವುದೇ ವಿಪಕ್ಷಗಳ ಜೊತೆ ಮೈತ್ರಿಗೆ ಸಿದ್ಧ ಎಂದು ಕೆಸಿಆರ್ ಹಾಗೂ ಅವರ ಪುತ್ರ ಈ ಹಿಂದೆಯೇ ಘೋಷಿಸಿದ್ದಾರೆ.

 ಸಭೆಯ ಕುರಿತು ವಿವರಿಸಿದ ಜಗಮೋಹನ್ ರೆಡ್ಡಿ, ಟಿಆರ್‌ಎಸ್ 17 ಮತ್ತು ನಾವು 25 ಸಂಸದರನ್ನು ಹೊಂದಿದ್ದು ಒಟ್ಟು ಸೇರಿದರೆ 42 ಆಗುತ್ತದೆ. ಕೇಂದ್ರದ ಮೇಲೆ ಒತ್ತಡ ಹೇರಲು ಇಷ್ಟು ಸಾಕು ಮತ್ತು ಈ ಬಲ ನಿರ್ಣಾಯಕವಾಗಬಲ್ಲದು ಎಂದರು.

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಪಡೆದಿದ್ದ ಕೆಸಿಆರ್, ಮುಂದೆ ರಾಷ್ಟ್ರ ರಾಜಕಾರಣದತ್ತ ಗಮನ ಕೇಂದ್ರೀಕರಿಸುವುದಾಗಿ ತಿಳಿಸಿದ್ದರು ಹಾಗೂ ಸಂಯುಕ್ತ ರಂಗದ ರಚನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಮಮತಾ ಬ್ಯಾನರ್ಜಿ, ನವೀನ್ ಪಟ್ಣಾಯಕ್, ಅಖಿಲೇಶ್ ಯಾದವ್ ಮತ್ತು ಮಾಯಾವತಿಯನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News