ಮಕ್ಕಳಿಗೆ ಪೀಡನೆ: ಬಿಹಾರದ ಇನ್ನೆರಡು ಆಶ್ರಯಧಾಮಗಳ ವಿರುದ್ಧ ಪ್ರಕರಣ ದಾಖಲು

Update: 2019-01-16 18:02 GMT

ಪಾಟ್ನ, ಜ.16: ಮಕ್ಕಳೊಂದಿಗೆ ಅನುಚಿತ ವ್ಯವಹಾರ ಮತ್ತು ಪೀಡನೆ ನೀಡಿದ ಆರೋಪದಲ್ಲಿ ಬಿಹಾರದ ಇನ್ನೂ ಎರಡು ಆಶ್ರಯಧಾಮಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈಯನ್ಸ್ (ಟಿಐಎಸ್‌ಎಸ್) ಸಂಸ್ಥೆ ನಡೆಸಿದ ಅಧ್ಯಯನ ಸಮೀಕ್ಷೆಯಲ್ಲಿ ಈ ವಿಷಯ ಬೆಳಕಿಗೆ ಬಂದಿದ್ದು, ಸಮೀಕ್ಷಾ ವರದಿಯಲ್ಲಿ ಹೆಸರಿಸಲಾಗಿರುವ ಎಲ್ಲಾ 17 ಆಶ್ರಯಧಾಮಗಳನ್ನೂ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ ಸಿಬಿಐಗೆ ನಿರ್ದೇಶಿಸಿದೆ. ಭಗಲ್‌ಪುರದಲ್ಲಿ ರೂಪಂ ಪ್ರಗತಿ ಸಮಾಜ ಸಮಿತಿ ನಡೆಸುತ್ತಿರುವ ‘ಬಾಯ್ಸ್ ಚಿಲ್ಡ್ರನ್ ಹೋಮ್’ ಹಾಗೂ ಗಯಾದಲ್ಲಿರುವ ‘ಹೌಸ್ ಮದರ್ ಚಿಲ್ಡ್ರನ್ಸ್ ಹೋಮ್ಸ್’ನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ಅಧಿಕಾರಿಗಳ ವಿಚಾರಣೆ ನಡೆಸಲಾಗುತ್ತಿದೆ.

‘ಹೌಸ್ ಮದರ್ ಚಿಲ್ಡ್ರನ್ಸ್ ಹೋಮ್ಸ್’ನಲ್ಲಿ ಎಳೆಯ ಮಕ್ಕಳನ್ನು ಅವಾಚ್ಯ ಶಬ್ದಗಳಿಂದ ಬೈಯುವುದು, ದೈಹಿಕ ಹಲ್ಲೆ, ಅಶ್ಲೀಲ ಸಂದೇಶಗಳನ್ನು ಬರೆಯಲು ಬಲವಂತಗೊಳಿಸುವುದು ಹಾಗೂ ಅವರಿಂದ ದೈಹಿಕ ಶ್ರಮದ ಕೆಲಸವನ್ನು ನಡೆಸಲಾಗುತ್ತಿದೆ. ಮಕ್ಕಳಿಗೆ ಅಧ್ಯಯನ ನಡೆಸಲು, ಮನರಂಜನೆಗೆ ಅಥವಾ ವೈದ್ಯಕೀಯ ಸೌಲಭ್ಯ ಪಡೆಯಲು ಸೂಕ್ತ ವ್ಯವಸ್ಥೆಯಿಲ್ಲ. ಸರಿಯಾಗಿ ಆಹಾರವನ್ನೂ ನೀಡುತ್ತಿರಲಿಲ್ಲ. ‘ಬಾಯ್ಸ್ ಚಿಲ್ಡ್ರನ್ ಹೋಮ್’ನಲ್ಲಿ ಬಾಲಕರಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು. ಮನರಂಜನೆಯ ವ್ಯವಸ್ಥೆ ಇರಲಿಲ್ಲ ಮತ್ತು ಮಕ್ಕಳಿಗೆ ರಜೆಯಲ್ಲಿ ಊರಿಗೆ ಹೋಗಲೂ ಬಿಡುತ್ತಿರಲಿಲ್ಲ ಎಂದು ಟಿಐಎಸ್‌ಎಸ್ ವರದಿಯಲ್ಲಿ ತಿಳಿಸಲಾಗಿದೆ. ವರದಿಯಲ್ಲಿ ತಿಳಿಸಲಾಗಿರುವ ಮಾಹಿತಿಯನ್ನು ಪ್ರಾಥಮಿಕ ದೂರು ಎಂದು ಎಫ್‌ಐಆರ್‌ನಲ್ಲಿ ಪರಿಗಣಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News