ಮತ್ತೆ ರೆಸಾರ್ಟ್ ರಾಜಕೀಯ
ಮಾನ್ಯರೇ,
ರಾಜ್ಯದಲ್ಲಿ ಮತ್ತೆ ರೆಸಾರ್ಟ್ ರಾಜಕಾರಣ ಪ್ರಾರಂಭಗೊಂಡಿದ್ದು ಈಗ ಎಲ್ಲರ ಗಮನ ರಾಜ್ಯ ರಾಜಕೀಯ ಚಟುವಟಿಕೆಯೆಡೆಗೆ ಕೇಂದ್ರೀಕೃತವಾಗಿದೆ. ಮೊದಲೆಲ್ಲ ನಮ್ಮನ್ನಾಳುವ ರಾಜಕಾರಣಿಗಳು ಜನರ ಕಷ್ಟಕಾರ್ಪಣ್ಯಗಳನ್ನು ಅರಿತು ಅವರ ನೋವಿಗೆ ಸ್ಪಂದಿಸಲು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಹಳ್ಳಿ ಕೇರಿಗಳಲ್ಲಿ ಸಮಯವನ್ನು ಕಳೆಯುತ್ತಿದ್ದರು. ಹೀಗಾಗಿ ಚುನಾವಣೆ ಎದುರಾದಾಗ ಇಂತಹ ಸಜ್ಜನ ರಾಜಕಾರಣಿಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವೂ ಇರಲಿಲ್ಲ ಮತ್ತು ಅದಕ್ಕಾಗಿ ಅವರು ವಾಮಮಾರ್ಗವನ್ನೂ ಅನುಸರಿಸುತ್ತಿರಲಿಲ್ಲ. ಆದರೇ ಈಗ ಕಾಲಬದಲಾಗಿದೆ, ಜನರ ಮಧ್ಯ ಇರಬೇಕಾದವರು ಇಂದು ದುಬಾರಿ ರೆಸಾರ್ಟ್‌ನಲ್ಲಿ ತಮ್ಮ ಅಮೂಲ್ಯ ಸಮಯವನ್ನು ಕಳೆಯುತ್ತಿದ್ದಾರೆ. ಒಂದೆಡೆ ರಾಜ್ಯಾದ್ಯಂತ ಯುವಕರು ಉದ್ಯೋಗಕ್ಕಾಗಿ ಪರದಾಡುತ್ತಿದ್ದರೆ, ಮಗದೊಂದೆಡೆ ಬಡವರ್ಗದವರು ಹಸಿವಿನಿಂದ ಕೆಂಗೆಟ್ಟಿದ್ದಾರೆ. ರೈತರ ಪರಿಸ್ಥಿತಿ ಹೇಳತೀರದು. ರಾಜಕಾರಣಿಗಳು ಇಂತಹವರ ನೋವಿಗೆ ಮೊದಲು ಸ್ಪಂದಿಸುವ ಅಗತ್ಯವಿದೆ. ಇಂದು ನಮ್ಮ ಪರಿಸ್ಥಿತಿ ಯಾವ ಮಟ್ಟಕ್ಕೆ ತಲುಪಿದೆ ಎಂದರೇ ಇಲ್ಲಿ ಕೆಲವು ಶಾಸಕರು ತಮ್ಮನ್ನು ಮಾರಾಟಕ್ಕಿಟ್ಟರೆ ಮತ್ತೆ ಕೆಲವರು ಆಪರೇಶನ್ ಹೆಸರಿನಲ್ಲಿ ಶಾಸಕರನ್ನು ಖರೀದಿಸಲು ಸೂಟ್‌ಕೇಸ್‌ನೊಂದಿಗೆ ದುಂಬಾಲು ಬಿದ್ದಿದ್ದಾರೆ. ರಾಜಕೀಯದಲ್ಲಿ ಇದೊಂದು ಕೆಟ್ಟ ಬೆಳವಣಿಗೆಯಾಗಿದೆ. ಇದನ್ನು ಇನ್ನಷ್ಟು ಬೆಳೆಸಿದರೆ ಮುಂಬರುವ ದಿನಗಳಲ್ಲಿ ರಾಜ್ಯಕ್ಕೆ ದುರಂತ ಎದುರಾಗುವುದು ಕಟ್ಟಿಟ್ಟ ಬುತ್ತಿ. ತಮ್ಮನ್ನು ಜನಪರ ಎಂದೆಲ್ಲ ಹೇಳಿಕೊಳ್ಳುವ ನಮ್ಮ ದೃಶ್ಯ ಮಾಧ್ಯಮಗಳು ಇಂತಹ ರಾಜಕಾರಣಿಗಳಿಗೆ ಬುದ್ಧಿ ಹೇಳಬೇಕೆ ಹೊರತು, ಅವರ ನಡತೆಯನ್ನು ಕೊಂಡಾಡುತ್ತ ಏನೋ ದೊಡ್ಡ ಸಾಧನೆ ಮಾಡಿದಂತೆ ಬಿಂಬಿಸಬಾರದು.