ನವಜಾತ ಶಿಶುವನ್ನು ಬದುಕಿಸಿದ ಕೆಲವೇ ಕ್ಷಣಗಳಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ ವೈದ್ಯ

Update: 2019-01-17 11:39 GMT

ಕೊಲ್ಕತ್ತಾ, ಜ. 17: ಪೂರ್ವ ಮಿಡ್ನಾಪುರದ ಪಟಂಡ ಎಂಬಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆಯಲ್ಲಿದ್ದ ವೈದ್ಯಾಧಿಕಾರಿಯೊಬ್ಬರು ನವಜಾತ ಶಿಶುವೊಂದರ ಪ್ರಾಣ ಉಳಿಸಿದ ಕೆಲವೇ ನಿಮಿಷಗಳಲ್ಲಿ ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.

ಮೃತ ವೈದ್ಯರನ್ನು 48 ವರ್ಷದ ಬಿಭಾಸ್ ಖುಟಿಯ ಎಂದು ಗುರುತಿಸಲಾಗಿದೆ.

ಪಟಂಡಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜನರಲ್ ಡ್ಯೂಟಿ ವೈದ್ಯಾಧಿಕಾರಿಯಾಗಿದ್ದ ಖುಟಿಯಾ ಅವರ ಆರೈಕೆಯಲ್ಲಿದ್ದ  ಸೊನಾಲಿ ಕುಲಿಯಾ ಮಜಿ ಎಂಬ ಮಹಿಳೆ 11 ಗಂಟೆಗೆ  ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಮಗು ಹುಟ್ಟಿದ ಕೂಡಲೇ ಅತ್ತಿರಲಿಲ್ಲ. ವೈದ್ಯ ಬಿಭಾಸ್ ಖುಟಿಯ ಕೂಡಲೇ ಶಿಶುವನ್ನು ವಾರ್ಮರ್ ನಲ್ಲಿರಿಸಿ ಅದರ  ಹೃದಯವನ್ನು ಪಂಪ್ ಮಾಡಿದ ಪರಿಣಾಮ ಮಗುವಿನ ಪ್ರಾಣ ಉಳಿದಿತ್ತು.

ಇದಾದ ಕೆಲವೇ ಕ್ಷಣಗಳಲ್ಲಿ ವೈದ್ಯರು ಹೆರಿಗೆ ಕೊಠಡಿಯಲ್ಲಿಯೇ ಕುಸಿದು ಬಿದ್ದರು. ಅಲ್ಲಿನ ಇತರ ಸಿಬ್ಬಂದಿ ಅವರನ್ನು ತಕ್ಷಣ ಪನ್‍ಸ್ಕುರಾ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ದಾಖಲಿಸಿದರೂ  ಅವರು ಅದಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ಅಲ್ಲಿನ ವೈದ್ಯರು ಘೋಷಿಸಿದರು.

ತಮ್ಮ ಕರ್ತವ್ಯಪರತೆಗೆ ಹೆಸರುವಾಸಿಯಾಗಿದ್ದ ವೈದ್ಯ ಖುಟಿಯ ಅವರು ಅಗತ್ಯ ಬಿದ್ದರೆ ದಿನದ 24 ಗಂಟೆಯೂ ರೋಗಿಗಳ ಆರೈಕೆಗೆ ಲಭ್ಯರಾಗುತ್ತಿದ್ದರು. ಪಟಂಡಾ ಪ್ರಾಥಮಿಕ ಆರೋಗ್ಯ ಕೇಂದ್ರದ ಹೆರಿಗೆ ಕೊಠಡಿಯಲ್ಲಿನ ಸೌಲಭ್ಯಗಳನ್ನು ಉತ್ತಮ ಪಡಿಸಲೂ ಅವರು ಶ್ರಮಿಸಿದ್ದರು.

ಅವರಿಗೆ ಈ ಹಿಂದೆಯೇ ವೈದ್ಯರು ಕೊರೊನರಿ ಆಂಜಿಯೋಪ್ಲಾಸ್ಟಿ ನಡೆಸುವಂತೆ ಸಲಹೆ ನೀಡಿದ್ದರೂ ಅವರು ಅದನ್ನು ನಿರ್ಲಕ್ಷ್ಯಿಸಿ ತಮ್ಮ ಕರ್ತವ್ಯದತ್ತ ಹೆಚ್ಚು ಗಮನ ನೀಡಿದ್ದರು. ಅವರ ಅಕಾಲಿಕ ನಿಧನ ಅವರ ಸಹೋದ್ಯೋಗಿಗಳನ್ನು ದುಃಖದ ಮಡುವಿನಲ್ಲಿ ಮುಳುಗಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News