ಅವಿಶ್ವಾಸ ನಿರ್ಣಯ ಜಯಿಸಿದ ಬ್ರಿಟನ್ ಪ್ರಧಾನಿ
ಲಂಡನ್, ಜ. 17: ಪ್ರಧಾನಿ ತೆರೇಸಾ ಮೇ ನೇತೃತ್ವದ ಬ್ರಿಟನ್ ಸರಕಾರ ಬುಧವಾರ ಅವಿಶ್ವಾಸ ನಿರ್ಣಯದಲ್ಲಿ ವಿಜಯಿಯಾಗಿದೆ ಹಾಗೂ ಮಂಗಳವಾರ ಹೌಸ್ ಆಫ್ ಕಾಮನ್ಸ್‌ನಲ್ಲಿ ತಿರಸ್ಕೃತಗೊಂಡಿರುವ ಬ್ರೆಕ್ಸಿಟ್ ಒಪ್ಪಂದಕ್ಕೆ ಹೊಸ ರೂಪುರೇಷೆ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಬ್ರೆಕ್ಸಿಟ್ ಒಪ್ಪಂದದ ವಿರುದ್ಧ ಮತ ಚಲಾಯಿಸಿದ್ದ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಬಂಡಾಯ ಸಂಸದರು ಮತ್ತು ಡೆಮಾಕ್ರಟಿಕ್ ಯೂನಿಯನಿಸ್ಟ್ ಪಾರ್ಟಿಯ 10 ಸಂಸದರು, ಬುಧವಾರ ನಡೆದ ಅವಿಶ್ವಾಸ ನಿರ್ಣಯ ಮತದಾನದಲ್ಲಿ ತೆರೇಸಾ ಮೇ ಪರವಾಗಿ ಮತ ಚಲಾಯಿಸಿದರು.
ಪ್ರತಿಪಕ್ಷ ಲೇಬರ್ ಪಕ್ಷದ ನಾಯಕ ಜೆರೆಮಿ ಕಾರ್ಬಿನ್ ಮಂಡಿಸಿದ ಅವಿಶ್ವಾಸ ನಿರ್ಣಯವನ್ನು 6 ಗಂಟೆಗಳ ಚರ್ಚೆಯ ಬಳಿಕ ಮತಕ್ಕೆ ಹಾಕಿದಾಗ, ನಿರ್ಣಯವು 325-306 ಮತಗಳ ಅಂತರದಿಂದ ಬಿದ್ದುಹೋಯಿತು.
ಒಳಗೆ ಬಾಕ್ಸ್
ತೆರೇಸಾರಿಂದ ಪರ್ಯಾಯ ಬ್ರೆಕ್ಸಿಟ್ ಒಪ್ಪಂದ?
ಅವಿಶ್ವಾಸ ನಿರ್ಣಯ ಜಯಿಸಿದ ಬಳಿಕ ಮಾತನಾಡಿದ ಪ್ರಧಾನಿ ಮೇ, ‘‘ಸದನದ ಬೆಂಬಲ ಹೊಂದಿರುವ ಪರಿಹಾರವೊಂದನ್ನು ನಾವು ಕಂಡುಹಿಡಿಯಬೇಕು. ಬ್ರೆಕ್ಸಿಟ್ ಒಪ್ಪಂದಕ್ಕೆ ಸಂಸತ್ತಿನ ಅನುಮೋದನೆ ಪಡೆಯುವ ದಾರಿಗಳನ್ನು ಗುರುತಿಸುವುದಕ್ಕಾಗಿ ರಚನಾತ್ಮಕ ಮನಸ್ಸಿನಿಂದ ಇಂದು ರಾತ್ರಿಯಿಂದ ನಾನು ಹಿರಿಯ ಸಂಸದರು ಮತ್ತು ಪಕ್ಷದ ನಾಯಕರನ್ನು ಭೇಟಿಯಾಗುತ್ತೇನೆ’’ ಎಂದು ಹೇಳಿದರು.
‘‘ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವುದನ್ನು (ಬ್ರೆಕ್ಸಿಟ್) ಖಾತರಿಪಡಿಸಲು ನಾವು ನಿರಂತರವಾಗಿ ಹೋರಾಡುತ್ತೇವೆ. ಸರಕಾರದ ಮುಂದಿನ ದಾರಿಯ ಬಗ್ಗೆ ಸೋಮವಾರ ಸಂಸತ್ತಿನಲ್ಲಿ ನಾನು ವಿವರಣೆ ನೀಡಲಿದ್ದೇನೆ’’ ಎಂದರು.
599 ಪುಟಗಳ ಮೂಲ ಬ್ರೆಕ್ಸಿಟ್ ಒಪ್ಪಂದವು ಸಂಸತ್ತಿನಲ್ಲಿ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ, ಪರ್ಯಾಯ ಬ್ರೆಕ್ಸಿಟ್ ಯೋಜನೆಯೊಂದನ್ನು ತೆರೇಸಾ ಮೇ ಸೋಮವಾರ ಸಂಸತ್ತಿನಲ್ಲಿ ಮಂಡಿಸುವ ನಿರೀಕ್ಷೆಯಿದೆ.