ದೇವಸ್ಥಾನಗಳಲ್ಲಿ ಕಲಹ ಸೃಷ್ಟಿಸುತ್ತಿರುವ ಬಿಜೆಪಿ: ಚಂದ್ರಬಾಬು ನಾಯ್ಡು

Update: 2019-01-19 14:40 GMT

ಅಮರಾವತಿ,ಜ.19: ಬಿಜೆಪಿಯು ದೇಶಾದ್ಯಂತ ದೇವಸ್ಥಾನಗಳಲ್ಲಿ ಕಲಹವನ್ನು ಸೃಷ್ಟಿಸುತ್ತಿದೆ ಎಂದು ಟಿಡಿಪಿ ವರಿಷ್ಠ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಶನಿವಾರ ಆರೋಪಿಸಿದರು. ತನ್ನ ಆರೋಪಕ್ಕೆ ಸಮರ್ಥನೆಯಾಗಿ ಶಬರಿಮಲೆ ದೇವಸ್ಥಾನಕ್ಕೆ ಎಲ್ಲ ವಯೋಮಾನದ ಮಹಿಳೆಯರ ಪ್ರವೇಶದ ಕುರಿತು ಕೇರಳದಲ್ಲಿ ಮನೆಮಾಡಿರುವ ಉದ್ವಿಗ್ನತೆಯನ್ನು ಅವರು ನಿದರ್ಶನವನ್ನಾಗಿ ನೀಡಿದರು.

ಕೋಲ್ಕತಾದಲ್ಲಿ ಬಿಜೆಪಿ ವಿರೋಧಿ ಪಕ್ಷಗಳ ಬೃಹತ್ ರ್ಯಾಲಿಯಲ್ಲಿ ಭಾಗವಹಿಸಿದ್ದ ಅವರು ಟೆಲಿಕಾನ್ಫರೆನ್ಸ್ ಮೂಲಕ ಟಿಡಿಪಿ ನಾಯಕರನ್ನುದ್ದೇಶಿಸಿ ಮಾತನಾಡಿ,ಬಿಜೆಪಿಯ ಕೆಟ್ಟ ರಾಜಕೀಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವಂತೆ ಸೂಚಿಸಿದರು. ಸಂಚಾರಿ ಮಾಧ್ಯಮಗಳಾಗುವಂತೆ ಮತ್ತು ಮನೆಮನೆಗೆ ತೆರಳಿ ಪ್ರಚಾರವನ್ನು ನಡೆಸುವಂತೆ ಅವರು ಟಿಡಿಪಿ ಕಾರ್ಯಕರ್ತರಿಗೆ ಕರೆ ನೀಡಿದರು.

ಬಿಜೆಪಿಯು ಮತ್ತೆ ರಾಮಮಂದಿರ ವಿಷಯವನ್ನೆತ್ತುತ್ತಿದೆ. ಇದರ ವಿರುದ್ಧ ನಾವು ಎಚ್ಚರಿಕೆಯಿಂದಿರಬೇಕಿದೆ ಎಂದರು.

ಕರ್ನಾಟಕದಲ್ಲಿಯ ರಾಜಕೀಯ ಕ್ಷೋಭೆಯನ್ನು ಪ್ರಸ್ತಾಪಿಸಿದ ಅವರು,ರಾಜ್ಯದಲ್ಲಿಯ ಜೆಡಿಎಸ್-ಕಾಂಗ್ರೆಸ್ ಸರಕಾರವನ್ನು ಉರುಳಿಸಲು ಶಾಸಕರ ಖರೀದಿಗೆ ಅದು ಪ್ರಯತ್ನಿಸುತ್ತಿದೆ. ಅದು ಕೆಟ್ಟ ರಾಜಕೀಯದಲ್ಲಿ ತೊಡಗಿಕೊಳ್ಳುವ ಮೂಲಕ ಪ್ರಜಾಪ್ರಭುತ್ವದ ಅಣಕವಾಡುತ್ತಿದೆ ಎಂದರು.

ತಾನು ಆಂಧ್ರಪ್ರದೇಶಕ್ಕೆ ವಿಶೇಷ ಆದರವನ್ನು ನೀಡಿದ್ದೇನೆ ಎಂಬ ಬಿಜೆಪಿಯ ಹೇಳಿಕೆಯನ್ನು ‘ಹಾಸ್ಯಾಸ್ಪದ’ ಎಂದು ಬಣ್ಣಿಸಿದ ಅವರು,ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕೋರಿ ತಾನು 29 ಬಾರಿ ದಿಲ್ಲಿಗೆ ಭೇಟಿ ನೀಡಿದ್ದರೂ ತನ್ನನ್ನು ಬರಿಗೈಯಲ್ಲಿ ವಾಪಸ್ ಕಳುಹಿಸಿದ್ದು ವಿಶೇಷ ಆದರವೇ?, ಗಾಯದ ಮೇಲೆ ಖಾರವನ್ನು ಎರಚುವುದು ವಿಶೇಷ ಆದರವೇ ಎಂದು ಪ್ರಶ್ನಿಸಿದರು.

ಆಂಧ್ರಪ್ರದೇಶದ ವಿರುದ್ಧ ಟಿಆರ್‌ಎಸ್ ನಾಯಕರ ದಾಳಿಗಳ ಬಗ್ಗೆ ಜನರಿಗೆ ತಿಳಿಸುವಂತೆ ಮತ್ತು ವೈಎಸ್‌ಆರ್ ನಾಯಕ ಜಗನ್ಮೋಹನ ರೆಡ್ಡಿ ಅವರೊಂದಿಗೆ ಶಾಮೀಲಾಗಿರುವುದನ್ನು ಬಯಲಿಗೆಳೆಯುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ ನಾಯ್ಡು,ಜಗನ್ ತನ್ನ ವಿರುದ್ಧದ ಪ್ರಕರಣಗಳಿಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ತನ್ನ ಅಕ್ರಮ ಸಂಪತ್ತಿಗಾಗಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್(ಕೆಸಿಆರ್) ಅವರೊಂದಿಗೆ ರಾಜಿ ಮಾಡಿಕೊಂಡಿದ್ದಾರೆ ಎಂದರು.

ರಾಜ್ಯದಲ್ಲಿಯ ಎಲ್ಲ 25 ಲೋಕಸಭಾ ಸ್ಥಾನಗಳನ್ನು ಮತ್ತು ಒಟ್ಟು 175 ವಿಧಾನಸಭಾ ಸ್ಥಾನಗಳ ಪೈಕಿ ಕನಿಷ್ಠ 150 ಸ್ಥಾನಗಳನ್ನು ಗೆಲ್ಲುವುದು ಪಕ್ಷದ ಗುರಿಯಾಗಿದೆ ಮತ್ತು ಪಕ್ಷವು ಅದನ್ನು ಸಾಧಿಸಬೇಕಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News