ಸೇನಾ ಕಾಲೇಜಿನಲ್ಲಿ ಬಾಲಕಿಯ ಅತ್ಯಾಚಾರ, ಹತ್ಯೆ

Update: 2019-01-23 16:00 GMT

ಪುಣೆ,ಜ.23: ಮಹಾರಾಷ್ಟ್ರದ ಸೇನಾ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಏಳು ವರ್ಷ ಪ್ರಾಯದ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ಮಾಡಲಾಗಿದೆ ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದು ಕೆಲಗಂಟೆಗಳ ನಂತರ ಪ್ರಕರಣದ ಆರೋಪಿಯ ಶವ ಕಾಲೇಜು ಆವರಣದ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯ ವಿಧವೆ ತಾಯಿ ತನ್ನ ವಿವಾಹ ಪ್ರಸ್ತಾವನೆಯನ್ನು ತಿರಸ್ಕರಿಸಿದ ಕಾರಣದಿಂದ ಆಕ್ರೋಶಗೊಂಡ 24ರ ಹರೆಯದ ಆರೋಪಿ ಈ ಕೃತ್ಯ ಎಸಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಮತ್ತು ಮೃತ ಬಾಲಕಿಯ ತಾಯಿ ಕಾಲೇಜಿನ ಮೆಸ್‌ನಲ್ಲಿ ನಾಗರಿಕ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು ಮತ್ತು ಅಲ್ಲೇ ವಾಸವಾಗಿದ್ದರು. ಮಂಗಳವಾರ ಕೆಲಸದಿಂದ ಮನೆಗೆ ವಾಪಸಾದಾಗ ಮನೆಯಲ್ಲಿ ಪ್ರಜ್ಞಾಹೀನಳಾಗಿ ಬಿದ್ದಿದ್ದ ಬಾಲಕಿಯನ್ನು ಕಂಡ ಆಕೆಯ ತಾಯಿ ಕೂಡಲೇ ಸಮೀಪದ ಆಸ್ಪತ್ರೆಗೆ ಸಾಗಿಸಿದ್ದರು. ಅಲ್ಲಿನ ವೈದ್ಯರು ಬಾಲಕಿಯನ್ನು ಹತ್ಯೆ ಮಾಡುವುದಕ್ಕೂ ಮೊದಲು ಅತ್ಯಾಚಾರ ನಡೆಸಲಾಗಿದೆ ಎಂದು ತಿಳಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. “ನನ್ನ ಗಂಡ ಕೆಲ ತಿಂಗಳ ಹಿಂದೆ ಮೃತಪಟ್ಟಿದ್ದಾರೆ. ನಂತರ ಆರೋಪಿ ಮದುವೆಗಾಗಿ ನನ್ನನ್ನು ಪೀಡಿಸುತ್ತಿದ್ದ. ಆದರೆ ನಾನು ನಿರಾಕರಿಸಿದ್ದೆ. ಸೋಮವಾರ ರಾತ್ರಿ ಇದೇ ವಿಷಯದಲ್ಲಿ ನಮ್ಮ ಮಧ್ಯೆ ಜಗಳ ನಡೆದಿತ್ತು. ಈ ವೇಳೆ ಆತ ಇದರ ಪರಿಣಾಮ ಗಂಭೀರವಾಗಿರುವುದಾಗಿ ಎಚ್ಚರಿಸಿದ್ದ” ಎಂದು ಮಹಿಳೆ ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News