ತಾನಿನ್ನೂ ಬದುಕಿದ್ದೇನೆ ಎಂದು ಸಾಬೀತುಗೊಳಿಸಲು ಒದ್ದಾಡುತ್ತಿರುವ 84ರ ವೃದ್ಧೆ

Update: 2019-01-24 15:37 GMT

ಮಧುರೈ,ಜ.24: ತಾನಿನ್ನೂ ಬದುಕಿದ್ದೇನೆ ಎಂದು ಸಾಬೀತು ಪಡಿಸಲು ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದ 84ರ ಹರೆಯದ ವೃದ್ಧೆಯ ರಕ್ಷಣೆಗೆ ಧಾವಿಸುವ ಮೂಲಕ ಮದ್ರಾಸ್ ಉಚ್ಚ ನ್ಯಾಯಾಲಯವು ಮಾನವೀಯತೆಯನ್ನು ಮೆರೆದಿದೆ. ವೃದ್ಧೆಯ ಆಸ್ತಿಯನ್ನು ಲಪಟಾಯಿಸಲು ಸೊಸೆ ಮೋಸದಿಂದ ಆಕೆಯ ಮರಣ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದಳು.

ರಾಮನಾಥಪುರಂ ಜಿಲ್ಲೆಯ ನಿವಾಸಿ ಎ.ಥೊಟ್ಟಿಯಮ್ಮಾಳ್ ಬವಣೆಯು ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಬುಧವಾರ ಈ ವಿಷಯವನ್ನು ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಂಡ ನ್ಯಾಯಾಲಯವು ಆಕೆಯ ಮರಣ ಪ್ರಮಾಣಪತ್ರವನ್ನು ರದ್ದುಗೊಳಿಸುವಂತೆ ಆದೇಶಿಸಿದೆ.

ಥೊಟ್ಟಿಯಮ್ಮಾಳ್ ಜಿಲ್ಲಾ ಲನ್ಯಾಯಾಲಯದಲ್ಲಿ ಶಿರಸ್ತೇದಾರನಾಗಿದ್ದ ಪುತ್ರ ಎ.ದಾಸ್ ಜೊತೆ ವಾಸವಿದ್ದರು. 12 ಸೆಂಟ್ಸ್ ಭೂಮಿ ಹೊಂದಿರುವ ಆಕೆಗೆ ಮೂವರು ಪುತ್ರಿಯರೂ ಇದ್ದಾರೆ. ದಾಸ್ 2016ರಲ್ಲಿ ಅಪಘಾತವೊಂದರಲ್ಲಿ ಮೃತನಾಗಿದ್ದು,ಅದಕ್ಕೂ ಮುನ್ನ ಆಗ 81 ವರ್ಷ ವಯಸ್ಸಾಗಿದ್ದ ಥೊಟ್ಟಿಯಮ್ಮಾಳ್‌ಗೆ ಮಾಹಿತಿ ನೀಡದೆ ಸದ್ರಿ ಭೂಮಿಯನ್ನು ಉಡುಗೊರೆ ರೂಪದಲ್ಲಿ ತನ್ನ ಪುತ್ರ ಪ್ರವೀಣ ಕುಮಾರ್ ಹೆಸರಿಗೆ ವರ್ಗಾಯಿಸಿದ್ದ.

ಉಡುಗೊರೆ ಪತ್ರದಲ್ಲಿ ತನ್ನ ಮೂವರು ಪುತ್ರಿಯರ ನಕಲಿ ಸಹಿಗಳನ್ನು ಮಾಡಿದ್ದ ಮಗ ತನ್ನನ್ನು ದಾರಿ ತಪ್ಪಿಸಿದ್ದ ಎಂದು ಥೊಟ್ಟಿಯಮ್ಮಾಳ್ ಆರೋಪಿಸಿದ್ದರು.

ದಾಸ್ ನಿಧನದ ಬಳಿಕ ಶಾಲಾ ಶಿಕ್ಷಕಿಯಾಗಿರುವ ಆತನ ಪತ್ನಿ ಮೀನಾಕ್ಷಿ ಥೊಟ್ಟಿಯಮ್ಮಾಳ್ ಜೀವಂತವಿದ್ದರೂ ಸೌಲಭ್ಯಗಳನ್ನು ಪಡೆದುಕೊಳ್ಳಲು ಕಾನೂನುಬದ್ಧ ವಾರಸಾ ಪತ್ರವನ್ನು ಹಾಜರುಪಡಿಸಿದ್ದಳು.

ತನ್ನನ್ನು ವಂಚಿಸಲಾಗಿದೆ ಎನ್ನುವುದು ಗೊತ್ತಾದಾಗ ಥೊಟ್ಟಿಯಮ್ಮಾಳ್ ಪೊಲೀಸ್ ದೂರನ್ನು ದಾಖಲಿಸಿದ್ದರು. ರಾಮನಾಥಪುರಂ ನ್ಯಾಯಾಲಯವು ಮೀನಾಕ್ಷಿ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿರ್ದೇಶ ನೀಡಿದ್ದರೂ ಪೊಲೀಸರು ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ.

ಮೀನಾಕ್ಷಿ ಮತ್ತು ಪ್ರವೀಣ ಕುಮಾರನನ್ನು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿಸಿರುವ ಉಚ್ಚ ನ್ಯಾಯಾಲಯವು 2016,ಸೆ.27ರಂದು ನೀಡಲಾಗಿದ್ದ ಮರಣ ಪ್ರಮಾಣಪತ್ರವನ್ನು ರದ್ದುಗೊಳಿಸುವಂತತೆ ಆದೇಶಿಸಿದೆ. ಅಲ್ಲದೆ ಉಡುಗೊರೆ ಪತ್ರವನ್ನು ರದ್ದುಗೊಳಿಸುವಂತೆ ರಾಮನಾಥಪುರಂ ಮುನ್ಸಿಪಲ್ ಆಯುಕ್ತರು ಮತ್ತು ಜಿಲ್ಲಾ ರಿಜಿಸ್ಟ್ರಾರ್‌ಗೆ ನಿರ್ದೇಶಗಳನ್ನು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News