ಪ್ರಿಯಾಂಕಾ ಗಾಂಧಿ ಸರಿಯಾದ ಹೆಜ್ಜೆಗಳನ್ನು ಹಾಕಿದರೆ ‘ಕ್ವೀನ್’ ಆಗುತ್ತಾರೆ: ಶಿವಸೇನೆ

Update: 2019-01-25 15:05 GMT

ಮುಂಬೈ,ಜ.25: ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತನ್ನ ಜವಾಬ್ದಾರಿಯನ್ನು ಅರಿತು ಸರಿಯಾದ ಹೆಜ್ಜೆಗಳನ್ನು ಹಾಕಿದರೆ ಅವರು ‘ಕ್ವೀನ್(ರಾಣಿ)’ ಆಗಿ ಹೊರಹೊಮ್ಮಲಿದ್ದಾರೆ ಎಂದು ಶುಕ್ರವಾರ ಹೇಳಿರುವ ಶಿವಸೇನೆಯು, ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಮುಂಬರುವ ಸಾರ್ವತ್ರಿಕ ಚುನಾವಣೆಗಳಲ್ಲಿ ಗೆಲ್ಲಲು ತಾನು ಏನೂ ಮಾಡಲು ಸಿದ್ಧ ಎನ್ನುವುದನ್ನು ತೋರಿಸಿದ್ದಾರೆ ಎಂದು ಹೇಳಿದೆ.

ರಾಹುಲ್ ವೈಫಲ್ಯದಿಂದಾಗಿಯೇ ಪ್ರಿಯಾಂಕಾರನ್ನು ಪಕ್ಷಕ್ಕೆ ವಿಧ್ಯುಕ್ತವಾಗಿ ಸೇರಿಸಿಕೊಳ್ಳಲಾಗಿದೆ ಎಂಬ ಬಿಜೆಪಿ ನಾಯಕರ ಟೀಕೆಗಳಲ್ಲಿ ಹುರುಳಿಲ್ಲ ಎಂದೂ ಸೇನೆ ತನ್ನ ಮುಖವಾಣಿ ‘ಸಾಮನಾ’ದ ಸಂಪಾದಕೀಯದಲ್ಲಿ ಹೇಳಿದೆ.

ರಫೇಲ್ ಯುದ್ಧ ವಿಮಾನಗಳ ಖರೀದಿ ವಿಷಯವನ್ನೆತ್ತುವ ಮೂಲಕ ರಾಹುಲ್ ಸರಕಾರದ ಸಮಸ್ಯೆಗಳನ್ನು ಹೆಚ್ಚಿಸಿದ್ದಾರೆ ಎಂದಿರುವ ಶಿವಸೇನೆ,ರಫೇಲ್ ಒಪ್ಪಂದದಲ್ಲಿ ಭ್ರಷ್ಟಾಚಾರ ಕುರಿತು ಮೋದಿ ಸರಕಾರದ ವಿರುದ್ಧ ರಾಹುಲ್ ದಾಳಿಗಳನ್ನು ಕಡೆಗಣಿಸಿದರೂ ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲುವಿನ ಹೆಗ್ಗಳಿಕೆಯನ್ನು ಅವರಿಗೆ ನೀಡದಿರುವುದು ಸಂಕುಚಿತ ಮನೋಸ್ಥಿತಿಯನ್ನು ತೋರಿಸುತ್ತದೆ ಎಂದು ಹೇಳಿದೆ.

ಉತ್ತರ ಪ್ರದೇಶದಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿ ಕಾಂಗ್ರೆಸ್‌ನ್ನು ದೂರವಿಟ್ಟು ಚುನಾವಣಾ ಮೈತ್ರಿಯನ್ನು ಮಾಡಿಕೊಂಡಿವೆ. ಆದರೂ ಬಹಳಷ್ಟು ಸಹನೆಯನ್ನು ಪ್ರದರ್ಶಿಸಿರುವ ರಾಹುಲ್ ಶಾಂತವಾಗಿಯೇ ಇದ್ದಾರೆ ಎಂದಿರುವ ಅದು,ಕಾಂಗ್ರೆಸ್ ಪಕ್ಷವು ಉತ್ತರ ಪ್ರದೇಶದಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಲಿದೆ ಮತ್ತು ಸಾಧ್ಯವಿರುವಲ್ಲೆಲ್ಲ ಎಸ್‌ಪಿ ಮತ್ತು ಬಿಎಸ್‌ಪಿಗಳಿಗೆ ನೆರವಾಗಲಿದೆ ಎಂದು ಪ್ರಕಟಿಸುವ ಮತ್ತು ಇದೇ ವೇಳೆ ಪ್ರಿಯಾಂಕಾರನ್ನು ಮುಖ್ಯವಾಹಿನಿ ರಾಜಕಾರಣಕ್ಕೆ ತರುವ ಮೂಲಕ ಅವರು ತನ್ನ ದಾಳಗಳನ್ನು ಸರಿಯಾಗಿಯೇ ಉರುಳಿಸಿದ್ದಾರೆ ಎಂದಿದೆ.

ಇದು ಕಾಂಗ್ರೆಸ್‌ಗೆ ನೆರವಾಗಲಿದೆ. ಪ್ರಿಯಾಂಕಾರ ರಾಜಕೀಯ ರಂಗಪ್ರವೇಶದ ಕುರಿತು ಪ್ರಧಾನ ಮಂತ್ರಿಗಳೂ ಮಾತನಾಡಬೇಕಾಯಿತು. ಜನರು ಒಂದು ಕುಟುಂಬವನ್ನು ಒಪ್ಪಿಕೊಂಡಿದ್ದರೂ ಕೆಲವರಿಗೇಕೆ ಅಷ್ಟೊಂದು ಹೊಟ್ಟೆಯುರಿಯುತ್ತದೆ ಎಂದು ಸಂಪಾದಕೀಯವು ವ್ಯಂಗ್ಯವಾಡಿದೆ.

ನೆಹರು-ಗಾಂಧಿ ಕುಟುಂಬವು ತನಗೆ ಪ್ರಬಲ ಪ್ರತಿಸ್ಪರ್ಧಿ ಎಂದು ಬಿಜೆಪಿಯು ಭಾವಿಸಿರುವುದರಿಂದ ಅದು ಆ ಕುಟುಂಬದ ಬಗ್ಗೆ ದ್ವೇಷ ಭಾವನೆಗಳನ್ನು ಹೊಂದಿದೆ ಎಂದಿರುವ ಶಿವಸೇನೆ,ಅಧಿಕಾರದಲ್ಲುಳಿಯಲು ಪ್ರಯತ್ನಿಸುತ್ತಿರುವ ಬಿಜೆಪಿ ತನಗೆದುರಾಗಿರುವ ತೀವ್ರ ಸವಾಲಿನಿಂದ ಭೀತಿಗೊಂಡಿದೆ ಎಂದಿದೆ.

ಪ್ರಿಯಾಂಕಾ ರೂಪದಲ್ಲಿ ಮತ್ತು ಮಾತುಗಳಲ್ಲಿ ತನ್ನ ಅಜ್ಜಿ ಇಂದಿರಾ ಗಾಂಧಿಯವರನ್ನೇ ಹೋಲುತ್ತಿದ್ದಾರೆ. ಇದು ಹಿಂದಿ ಭಾಷಿಕ ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಖಂಡಿತ ಲಾಭಗಳನ್ನು ತರಲಿದೆ. ಅವರು ತನ್ನ ದಾಳಗಳನ್ನು ಸರಿಯಾಗಿ ಉರುಳಿಸಿದರೆ ಇಂದಿರಾರಂತೆ ‘ರಾಣಿ’ಯಾಗಿ ಹೊರಹೊಮ್ಮುತ್ತಾರೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News