ಶೇ.10 ಮೀಸಲಾತಿ ಪ್ರಶ್ನಿಸಿದ ಅರ್ಜಿಯ ವಿಚಾರಣೆ ನಡೆಸಲಿದ್ದೇವೆ: ಸುಪ್ರೀಂ

Update: 2019-01-25 18:22 GMT

ಹೊಸದಿಲ್ಲಿ, ಜ.25: ಮೇಲ್ಜಾತಿಯ ಬಡವರಿಗೆ ಶೇ.10ರಷ್ಟು ಮೀಸಲಾತಿ ಜಾರಿ ನಿರ್ಧಾರಕ್ಕೆ ತಡೆಯೊಡ್ಡಲು ನಿರಾಕರಿಸಿರುವ ಸುಪ್ರೀಂಕೋರ್ಟ್, ಮೀಸಲಾತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸುವುದಾಗಿ ತಿಳಿಸಿದೆ. ಮೇಲ್ಜಾತಿಯ ಬಡವರಿಗೆ ಶೇ.10 ಮೀಸಲಾತಿ ನೀಡಿರುವ ಕೇಂದ್ರ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ನಾಲ್ಕು ವಾರಗಳಲ್ಲಿ ನಡೆಸಲು ಸುಪ್ರೀಂ ನಿರ್ಧರಿಸಿದೆ. ಶೇ.10 ಮೀಸಲಾತಿ ನಿರ್ಧಾರದಿಂದ ಮೀಸಲಾತಿಗೆ ಶೇ.50ರ ಮಿತಿ ವಿಧಿಸಿರುವ ಸುಪ್ರೀಂಕೋರ್ಟ್‌ನ ಆದೇಶದ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ. ಅಲ್ಲದೆ ಸುಪ್ರೀಂ ಕೋರ್ಟ್ ನೀಡಿರುವ 1992ರ ಮಂಡಲ್ ಆಯೋಗದ ತೀರ್ಪಿನಲ್ಲಿ ದೇಶದ ಸಂವಿಧಾನದಡಿ ಆರ್ಥಿಕ ಮಾನದಂಡದ ಏಕೈಕ ಆಧಾರದಲ್ಲಿ ಮೀಸಲಾತಿ ಒದಗಿಸಲಾಗದು ಎಂದು ಸ್ಪಷ್ಟಪಡಿಸಿರುವುದನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

   2006ರಲ್ಲಿ ಎಂ. ನಾಗರಾಜ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮೀಸಲಾತಿ ಮಿತಿ ಶೇ.50ನ್ನು ಮೀರಬಾರದು ಎಂದು ತೀರ್ಪು ನೀಡಿತ್ತು. ಈಗ ಸರಕಾರದ ನಿರ್ಧಾರದಿಂದ ಈ ತೀರ್ಪಿನ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News