ಪದ್ಮಶ್ರೀ ಪ್ರಶಸ್ತಿ ತಿರಸ್ಕರಿಸಿದ ನವೀನ್ ಪಟ್ನಾಯಕ್ ಸಹೋದರಿ ಗೀತಾ ಮೆಹ್ತಾ

Update: 2019-01-26 04:49 GMT

ಹೊಸದಿಲ್ಲಿ, ಜ.26: ಲೇಖಕಿ ಹಾಗೂ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಸಹೋದರಿ ಗೀತಾ ಮೆಹ್ತಾ ಕೇಂದ್ರ ಸರಕಾರ ಗಣರಾಜ್ಯೋತ್ಸವ ನಿಮಿತ್ತ ತನಗೆ ಘೋಷಿಸಿರುವ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ್ದಾರೆ. ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ನೀಡಿರುವ ಗಣನೀಯ ಸೇವೆ ಪರಿಗಣಿಸಿ ಮೆಹ್ತಾರನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.

ಪ್ರಶಸ್ತಿ ಘೋಷಿಸಿದ ಸಮಯ ಸರಿಯಿಲ್ಲ ಎಂಬ ಕಾರಣ ಮುಂದಿಟ್ಟು ನ್ಯೂಯಾರ್ಕ್‌ನಲ್ಲಿ ನೆಲೆಸಿರುವ ಗೀತಾ ಮೆಹ್ತಾ ಪ್ರಶಸ್ತಿ ನಿರಾಕರಿಸಿದ್ದಾರೆ. ಮೆಹ್ತಾ ಅವರ ಈ ನಿರ್ಧಾರ ಕೇಂದ್ರಕ್ಕೆ ತೀವ್ರ ಮುಜುಗರ ತಂದಿದೆ.

ಈ ವರ್ಷದ ಎಪ್ರಿಲ್-ಮೇನಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಒಡಿಶಾದಲ್ಲಿ ಪ್ರಾಬಲ್ಯ ಸಾಧಿಸಲು ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾ ದಳ ಹಾಗೂ ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ.

‘‘ನಾನು ಪದ್ಮಶ್ರೀ ಪ್ರಶಸ್ತಿಗೆ ಯೋಗ್ಯ ಎಂದು ಯೋಚಿಸಿರುವ ಸರಕಾರಕ್ಕೆ ತುಂಬಾ ಗೌರವ ನೀಡುವೆ. ಆದರೆ, ಅತೀವ ಬೇಸರದಿಂದ ಈ ಪ್ರಶಸ್ತಿ ನಿರಾಕರಿಸುತ್ತಿದ್ದೇನೆ. ಸಾರ್ವತ್ರಿಕ ಚುನಾವಣೆ ಹತ್ತಿರ ಬರುತ್ತಿದೆ. ಈ ಸಮಯದಲ್ಲಿ ಪ್ರಶಸ್ತಿ ಸ್ವೀಕರಿಸಿದರೆ ತಪ್ಪಾಗಿ ಅರ್ಥೈಸಿಕೊಳ್ಳಬಹುದು. ಸರಕಾರ ಹಾಗೂ ನನಗೆ ಇದರಿಂದ ಕಿರಿಕಿರಿಯಾಗುತ್ತದೆ. ಈ ವಿಚಾರದಲ್ಲಿ ನಾನು ವಿಷಾದಿಸುತ್ತೇನೆ’’ ಎಂದು ಸುದ್ದಿಸಂಸ್ಥೆಗೆ ನೀಡಿದ ಹೇಳಿಕೆಯಲ್ಲಿ ಮೆಹ್ತಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News