ಖಾಲಿ ಮೈದಾನದಲ್ಲಿ ಗಣರಾಜ್ಯೋತ್ಸವದ ಭಾಷಣ ಮಾಡಿದ ಮಿಝೊರಾಂ ರಾಜ್ಯಪಾಲ

Update: 2019-01-26 08:24 GMT
ಮಿಝೊರಾಂ ರಾಜ್ಯಪಾಲ ಕೆ.ರಾಜಶೇಖರನ್ 

ಐರೊಲ್, ಜ.26: 70ನೇ ಗಣರಾಜ್ಯೋತ್ಸವ ನಿಮಿತ್ತ ಮಿರೊರಾಂ ರಾಜ್ಯಪಾಲ ಕೆ.ರಾಜಶೇಖರನ್ ಶನಿವಾರ ಖಾಲಿ ಮೈದಾನದಲ್ಲಿ ಭಾಷಣ ಮಾಡಿದ್ದಾರೆ. ಪೌರತ್ವ (ತಿದ್ದುಪಡಿ)ಮಸೂದೆ ಜಾರಿ ಖಂಡಿಸಿ ವಿವಿಧ ಸಂಘಟನೆಗಳು ರಾಜ್ಯವ್ಯಾಪಿ ಗಣರಾಜ್ಯೋತ್ಸವವನ್ನು ಬಹಿಷ್ಕರಿಸಿದ ಹಿನ್ನೆಲೆಯಲ್ಲಿ ರಾಜ್ಯಪಾಲರಿಗೂ ಬಹಿಷ್ಕಾರದ ಬಿಸಿ ತಟ್ಟಿದೆ.

ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸಲಿಲ್ಲ. ಕೇವಲ ಸಚಿವರು, ಶಾಸಕರು ಹಾಗೂ ಉನ್ನತ ಅಧಿಕಾರಿಗಳು ಹಾಜರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನಾಗರಿಕ ಸಮಾಜ ಗುಂಪುಗಳು ಹಾಗೂ ವಿದ್ಯಾರ್ಥಿ ಮಂಡಳಿಯ ಸಂಘಟನೆಯಾದ ಎನ್‌ಜಿಒ ಸಮನ್ವಯ ಸಮಿತಿ ಗಣರಾಜ್ಯೋತ್ಸವವನ್ನು ಬಹಿಷ್ಕರಿಸಲು ಕರೆ ನೀಡಿತ್ತು.

ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಸಾಮಾನ್ಯವಾಗಿ 30ಕ್ಕೂ ಅಧಿಕ ದಳಗಳು ಭಾಗವಹಿಸುತ್ತವೆ. ಆದರೆ ಈ ಬಾರಿ ಕೇವಲ ಆರು ಶಸ್ತ್ರಸಜ್ಜಿತ ದಳಗಳು ಭಾಗವಹಿಸಿದ್ದವು.

ಇತರ ಜಿಲ್ಲಾ ಕೇಂದ್ರಗಳಲ್ಲಿ ಹಿರಿಯ ಅಧಿಕಾರಿಗಳು ಹಾಗೂ ಸಾರ್ವಜನಿಕರ ಅನುಪಸ್ಥಿತಿಯಲ್ಲಿ ಉಪ ಆಯುಕ್ತರು ತ್ರಿವರ್ಣ ಧ್ವಜಾರೋಹಣ ಮಾಡಿದರು. ಆದರೆ, ರಾಜ್ಯದಲ್ಲಿ ರಾಜ್ಯೋತ್ಸವದ ಸಂಭ್ರಮ ಶಾಂತಿಯುತವಾಗಿ ನಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News