ಸಮ್ಮೋಹನಗೊಳಿಸಿದ 70ನೇ ಗಣರಾಜ್ಯೋತ್ಸವದ ಸಂಭ್ರಮ: ರಾಜಪಥ್‌ನಲ್ಲಿ 'ನಾರಿ ಶಕ್ತಿ'ಯ ಪೂರ್ಣ ಪ್ರದರ್ಶನ

Update: 2019-01-26 14:21 GMT

►ಆಗಸವನ್ನು ಸೀಳುತ್ತ ಮನರಂಜಿಸಿದ ವಾಯುಪಡೆಯ ವಿಮಾನಗಳು

►ಇತಿಹಾಸ ನಿರ್ಮಿಸಿದ ಸರ್ವ ಮಹಿಳಾ ಅಸ್ಸಾಂ ರೈಫಲ್ಸ್ ತುಕಡಿ

►ಮಹಾತ್ಮಾ ಗಾಂಧಿಯವರ ಜೀವನವನ್ನು ಬಿಂಬಿಸಿದ ಸ್ತಬ್ಧಚಿತ್ರಗಳು

ಹೊಸದಿಲ್ಲಿ,ಜ.26: ಭಾರತವು ಶನಿವಾರ ದಿಲ್ಲಿಯ ರಾಜಪಥ್‌ನಲ್ಲಿ ಭವ್ಯ ಮಿಲಿಟರಿ ಪರೇಡ್,ತನ್ನ ಇತಿಹಾಸ,ಸಾಂಸ್ಕೃತಿಕ ವೈವಿಧ್ಯ ಮತ್ತು ವ್ಯೂಹಾತ್ಮಕ ಶಸ್ತ್ರಾಸ್ತ್ರಗಳ ಪ್ರದರ್ಶನದೊಂದಿಗೆ 70ನೇ ಗಣರಾಜ್ಯೋತ್ಸವವನ್ನು ಸಂಭ್ರಮದೊಂದಿಗೆ ಆಚರಿಸಿತು. ವಿದೇಶಿ ಗಣ್ಯರು ಮತ್ತು ದೇಶದ ಅತ್ಯುನ್ನತ ರಾಜಕೀಯ ನಾಯಕರು ಹಾಗೂ ಮಿಲಿಟರಿ ಅಧಿಕಾರಿಗಳು ಸೇರಿದಂತೆ ಸಾವಿರಾರು ಜನರು ಈ ದೃಶ್ಯವೈಭವಗಳನ್ನು ಕಣ್ತುಂಬಿಸಿಕೊಂಡರು.

90 ನಿಮಿಷಗಳ ಕಾಲ ನಡೆದ ಸಂಭ್ರಮಾಚರಣೆಯಲ್ಲಿ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 16 ಹಾಗೂ ಕೇಂದ್ರ ಸರಕಾರದ ಸಚಿವಾಲಯಗಳು ಮತ್ತು ಇಲಾಖೆಗಳ ಆರು ಸ್ತಬ್ಧಚಿತ್ರಗಳು ಸೇರಿದಂತೆ ಒಟ್ಟು 22 ಸ್ತಬ್ಧಚಿತ್ರಗಳು ಸಾಂಸ್ಕೃತಿಕ ಪರೇಡ್‌ನಲ್ಲಿ ಪಾಲ್ಗೊಂಡಿದ್ದವು. ಇವು ಒಟ್ಟಾರೆಯಾಗಿ ಮಹಾತ್ಮಾ ಗಾಂಧೀಜಿಯವರ ಜೀವನ ಮತ್ತು ಆದರ್ಶಗಳನ್ನು ಬಿಂಬಿಸಿದ್ದವು.

ಸ್ವಾತಂತ್ರ ಸಂಗ್ರಾಮದಲ್ಲಿ ಪಾಲ್ಗೊಳ್ಳುವ ಮುನ್ನ 21 ವರ್ಷಗಳನ್ನು ದ.ಆಫ್ರಿಕಾದಲ್ಲಿ ಕಳೆದಿದ್ದ ರಾಷ್ಟ್ರ ಪಿತಾಮಹನ 150ನೇ ಜನ್ಮ ದಿನಾಚರಣೆಯನ್ನು ಭಾರತವು ಆಚರಿಸುತ್ತಿರುವ ಈ ಸಂದರ್ಭದಲ್ಲಿ ರಾಮಫೋಸಾ ಅವರ ಉಪಸ್ಥಿತಿಯು ಮಹತ್ವವನ್ನು ಪಡೆದುಕೊಂಡಿತ್ತು.

ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಭಾರತದ ಅತ್ಯುನ್ನತ ಶಾಂತಿಕಾಲದ ಗೌರವವಾಗಿರುವ ಪ್ರಶಸ್ತಿಯಾಗಿರುವ 'ಅಶೋಕ ಚಕ್ರ' ಪ್ರಶಸ್ತಿಯನ್ನು ಹುತಾತ್ಮ ಯೋಧ ಲ್ಯಾನ್ಸ್ ನಾಯಕ್ ನಝೀರ್ ಅಹ್ಮದ್ ವಾನಿಯವರಿಗೆ ಮರಣೋತ್ತರವಾಗಿ ಪ್ರದಾನಿಸಿದ ಬಳಿಕ ಭವ್ಯ ಪರೇಡ್ ಆರಂಭಗೊಂಡಿತು. ಮೊದಲು ಉಗ್ರಗಾಮಿಯಾಗಿದ್ದು ಬಳಿಕ ಭಾರತೀಯ ಸೇನೆಯನ್ನು ಸೇರಿದ್ದ ವಾನಿ ಕಳೆದ ವರ್ಷದ ನವೆಂಬರ್‌ನಲ್ಲಿ ಕಾಶ್ಮೀರದ ಶೋಪಿಯಾನ್‌ನಲ್ಲಿ ಭಯೋತ್ಪಾದಕರೊಂದಿಗೆ ಹೋರಾಟದ ಸಂದರ್ಭ ಬಲಿದಾನಗೈದಿದ್ದರು. ಅವರ ಪತ್ನಿ ಮಹಜಬೀನ್ ಮತ್ತು ತಾಯಿ ರಜಾ ಬಾನು ಅವರು ಭಾರವಾದ ಹೃದಯಗಳೊಂದಿಗೆ ಪ್ರಶಸ್ತಿಯನ್ನು ಸ್ವೀಕರಿಸಿದರು.

ಗಣರಾಜ್ಯೋತ್ಸವ ಪರೇಡ್‌ಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಇಂಡಿಯಾ ಗೇಟ್‌ನಲ್ಲಿರುವ ಅಮರಜವಾನ್ ಜ್ಯೋತಿ ಸ್ಮಾರಕದಲ್ಲಿ ಪುಷ್ಪಗುಚ್ಛವನ್ನಿರಿಸುವ ಮೂಲಕ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರಯೋಧರಿಗೆ ರಾಷ್ಟ್ರದ ಗೌರವವನ್ನು ಸಲ್ಲಿಸಿದರು.

ಸಂಪ್ರದಾಯಕ್ಕನುಗುಣವಾಗಿ ತ್ರಿವರ್ಣ ಧ್ವಜಾರೋಹಣದ ಬಳಿಕ ರಾಷ್ಟ್ರಗೀತೆಯನ್ನು ನುಡಿಸಲಾಯಿತು. ಈ ವೇಳೆ 21 ಕುಶಾಲು ತೋಫುಗಳ ವಂದನೆಯನ್ನು ಸಲ್ಲಿಸಲಾಯಿತು. ಬಳಿಕ ರಾಷ್ಟ್ರಪತಿಗಳು ಪಥ ಸಂಚಲನದಲ್ಲಿ ಮಿಲಿಟರಿ ತುಕಡಿಗಳಿಂದ ಗೌರವ ವಂದನೆಗಳನ್ನು ಸ್ವೀಕರಿಸಿದರು.

ಚರಿತ್ರೆಯಲ್ಲಿ ಮೊದಲ ಬಾರಿಗೆ ಭಾರತೀಯ ಸೇನೆಯ ಹಿರಿಯ ನಿವೃತ್ತ ಯೋಧರಾದ,90 ವರ್ಷ ಪ್ರಾಯವನ್ನು ದಾಟಿರುವ ಪರಮಾನಂದ,ಲಾಲ್ತಿ ರಾಮ,ಹೀರಾ ಸಿಂಗ್ ಮತ್ತು ಭಾಗಮಲ್ ಅವರು ಪಾಲ್ಗೊಂಡಿದ್ದು ಪರೇಡ್‌ನ ಪ್ರಮುಖ ಅಂಶವಾಗಿತ್ತು. ಅಮೆರಿಕನ್ ಹೋವಿಟ್ಝರ್ ಎಂ 777,ಮುಖ್ಯ ಯುದ್ಧಟ್ಯಾಂಕ್ ಟಿ-90 ಮತ್ತು ದೇಶಿಯವಾಗಿ ನಿರ್ಮಿತ ಆಕಾಶ ಶಸ್ತ್ರಾಸ್ತ್ರ ವ್ಯವಸ್ಥೆ ಇತ್ಯಾದಿಗಳು ಪರೇಡ್‌ನ ಇತರ ಮುಖ್ಯಾಂಶಗಳಲ್ಲಿ ಸೇರಿದ್ದವು. ಮೇ.ಖುಷ್ಬೂ ಕನ್ವರ್ ನೇತೃತ್ವದ ಸರ್ವ ಮಹಿಳಾ ಅಸ್ಸಾಂ ರೈಫಲ್ಸ್ ತುಕಡಿಯು ಪರೇಡ್‌ನಲ್ಲಿ ಮೊದಲ ಬಾರಿ ಭಾಗಿಯಾಗಿ ಹೊಸ ಇತಿಹಾಸವನ್ನು ಸೃಷ್ಟಿಸುವುದರೊಂದಿಗೆ 'ನಾರಿ ಶಕ್ತಿ'ಯು ಪೂರ್ಣ ಪ್ರದರ್ಶನಗೊಂಡಿತ್ತು. ಭಾರತೀಯ ಸೇನೆಯ ಸೇವಾ ಕಾರ್ಪ್ಸ್‌ನ 144 ಪುರುಷರಿದ್ದ ಪುರುಷರ ತುಕಡಿಯ ನೇತೃತ್ವವನ್ನು ಮೊದಲ ಬಾರಿಗೆ ಮಹಿಳಾ ಅಧಿಕಾರಿ ಲೆಫ್ಟಿನೆಂಟ್ ಭಾವನಾ ಕಸ್ತೂರಿ ಹಾಗೂ ವರ್ಗಾಯಿಸಬಹುದಾದ ಉಪಗ್ರಹ ಟರ್ಮಿನಲ್‌ಗಳ ತುಕಡಿಯ ನೇತೃತ್ವವನ್ನು ಸೇನಾ ಪಡೆಯ ತ್ರಿಜಿ ಅಧಿಕಾರಿ ಕ್ಯಾಪ್ಟನ್ ಭಾವನಾ ಸೈಯಲ್ ವಹಿಸಿದ್ದರು. 

ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು,ಮಾಜಿ ಪ್ರಧಾನಿ ಮನಮೋಹನ ಸಿಂಗ್,ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಗಣ್ಯಾತಿಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಕೆಲವೇ ದಿನಗಳ ಹಿಂದೆ ಇಬ್ಬರು ಶಂಕಿತ ಜೈಷ್-ಎ-ಮುಹಮ್ಮದ್ ಭಯೋತ್ಪಾದಕರನ್ನು ಬಂಧಿಸಿದ್ದ ಹಿನ್ನೆಲೆಯಲ್ಲಿ ಸಮಾರಂಭಕ್ಕೆ ಭಾರಿ ಬಂದೋಬಸ್ತ್ ಒದಗಿಸಲಾಗಿತ್ತು.

ಕರ್ನಾಟಕದ ಸ್ತಬ್ಧಚಿತ್ರವು 1924,ಡಿ.26-27ರಂದು ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್ ಸಮ್ಮೇಳನದಲ್ಲಿ ಗಾಂಧೀಜಿಯವರ ಮಹತ್ವಪೂರ್ಣ ಪ್ರಯತ್ನಗಳನ್ನು ಬಿಂಬಿಸಿದರೆ,ಮಹಾರಾಷ್ಟ್ರ,ಪಂಜಾಬ್ ಮತ್ತು ಗುಜರಾತ್ ಅನುಕ್ರಮವಾಗಿ ಚಲೇಜಾವ್ ಚಳವಳಿ,ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ ಮತ್ತು ದಂಡಿ ಯಾತ್ರೆಯನ್ನು ನಿರೂಪಿಸುವ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಿದ್ದವು. ಅಸ್ಸಾಮಿನ ಸ್ತಬ್ಧಚಿತ್ರ ರಾಜ್ಯದಲ್ಲಿ ಗಾಂಧೀಜಿಯವರ ಆಂದೋಲನವನ್ನು ಬಿಂಬಿಸಿದ್ದರೆ,ಉತ್ತರಾಖಂಡ ತನ್ನ ಸ್ತಬ್ಧಚಿತ್ರದಲ್ಲಿ ಅನುಶಕ್ತಿ ಆಶ್ರಮವನ್ನು ಪ್ರತಿಬಿಂಬಿಸಿತ್ತು.

ತಮ್ಮ 'ಅಸಾಮಾನ್ಯ ಸಾಧನೆ'ಗಾಗಿ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ವಿಜೇತರಾದ ಆರು ಬಾಲಕಿಯರು ಮತ್ತು 20 ಬಾಲಕರು ಸೇರಿದಂತೆ 26 ಚಿಣ್ಣರೂ ಭಾರತದ ಶಕ್ತಿಯನ್ನು ವಿಶ್ವಕ್ಕೆ ಸಾರಿದ ಈ ಸಮಾರಂಭಕ್ಕೆ ಸಾಕ್ಷಿಗಳಾಗಿದ್ದರು.

ಮದ್ರಾಸ್ ರೆಜಿಮೆಂಟ್,ರಾಜಪುತಾನಾ ರೈಫಲ್ಸ್,ಸಿಖ್ ರೆಜಿಮೆಂಟ್ ಮತ್ತು ಗೂರ್ಖಾ ಬ್ರಿಗೇಡ್ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದ ಸೇನಾ ತುಕಡಿಗಳಲ್ಲಿ ಸೇರಿದ್ದವು.

144 ಯುವ ನಾವಿಕರನ್ನೊಳಗೊಂಡಿದ್ದ ಭಾರತೀಯ ನೌಕಾಪಡೆಯ ತುಕಡಿಯ ನೇತೃತ್ವವನ್ನು ಲೆ.ಕ.ಅಂಬಿಕಾ ಸುಧಾಕರನ್ ವಹಿಸಿದ್ದರು. ಭಾರತೀಯ ವಾಯುಪಡೆಯ ತುಕಡಿಯು ಸಹ 144 ಯೋಧರನ್ನೊಳಗೊಂಡಿತ್ತು. ಇವುಗಳ ಹಿಂದೆಯೇ ಈ ಪಡೆಗಳ ಸಾಮರ್ಥ್ಯವನ್ನು ಬಿಂಬಿಸುವ ಸ್ತಬ್ಧಚಿತ್ರಗಳು ಸಾಗಿ ಬಂದವು. ವಾಯುಪಡೆಯ ಸ್ಥಬ್ಧಚಿತ್ರವು ಲಘು ಯುದ್ಧ ವಿಮಾನ,ಲೋ ಲೆವೆಲ್ ಲೈಟ್ ವೇಟ್ ರಾಡಾರ್,ಸುಖೋಯ್-30ಎಂಕೆ ಮತ್ತು ಆಕಾಶ ಕ್ಷಿಪಣಿ ವ್ಯವಸ್ಥೆಗಳನ್ನು ಪ್ರದರ್ಶಿಸಿತ್ತು.

ಎನ್‌ಸಿಸಿ ಮತ್ತು ಎನ್‌ಎಸ್‌ಎಸ್ ಜೊತೆಗೆ ಅರೆ ಸೇನಾಪಡೆಗಳು ಮತ್ತು ಇತರ ಪೂರಕ ಪಡೆಗಳೂ ಪರೇಡ್‌ನಲ್ಲಿ ಭಾಗವಹಿಸಿದ್ದವು.

ಪರೇಡ್‌ನ ಅಂತ್ಯದಲ್ಲಿ ಭಾರತೀಯ ವಾಯುಪಡೆಯ ವೈಮಾನಿಕ ಪ್ರದರ್ಶನ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಆಧುನಿಕ ಲಘು ಹೆಲಿಕಾಪ್ಟರ್‌ಗಳು,ಸಿ-1301 ಸೂಪರ್ ಹರ್ಕ್ಯುಲಸ್ ವಿಮಾನಗಳು,ಸಿ-17 ಗ್ಲೋಬ್ ಮಾಸ್ಟರ್ ಮತ್ತು ಎರಡು ಸುಖೋಯ್-30 ಎಂಕೆಐ ಯುದ್ಧವಿಮಾನಗಳು,ಜಾಗ್ವಾರ್ ಮತ್ತು ಮಿಗ್-29 ವಿಮಾನಗಳು ಆಗಸವನ್ನು ಸೀಳುತ್ತ ವಿವಿಧ ಕಸರತ್ತುಗಳನ್ನು ಪ್ರದರ್ಶಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಮೆರೆದವು.

ಎಸ್‌ಯು-30 ಎಂಕೆಐ ಯುದ್ಧವಿಮಾನವೊಂದು ಪ್ರತಿ ಗಂಟೆಗೆ 900 ಕೀ.ಮೀ.ವೇಗದಲ್ಲಿ ಚಲಿಸುತ್ತ 'ವರ್ಟಿಕಲ್ ಚಾರ್ಲಿ' ಕಸರತ್ತನ್ನು ಪ್ರದರ್ಶಿಸುವ ಮೂಲಕ ಪರೇಡ್ ಸಂಪನ್ನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News